ಸಮಾನ ನಾಗರಿಕ ಸಂಹಿತೆ ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಥದಿಂದ ದೂರ ಸರಿದ ಹಿಮಾಚಲ ಸಚಿವ
ಫೋಟೋ- PTI
Read more at: https://www.deccanherald.com/national/national-politics/vikramaditya-singh-dhani-ram-shandil-among-7-to-be-inducted-in-himachal-cabinet-on-sunday-1178936.html
ಶಿಮ್ಲಾ: ಹಿಮಾಚಲ ಪ್ರದೇಶದ ಲೋಕೋಪಯೋಗಿ ಖಾತೆ ಸಚಿವ ವಿಕ್ರಮಾದಿತ್ಯ ಸಿಂಗ್ ಶುಕ್ರವಾರ ಸಮಾನ ನಾಗರಿಕ ಸಂಹಿತೆಗೆ ಸಂಪೂರ್ಣ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ ಪಥದಿಂದ ವಿಮುಖರಾಗಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಅವರು ಸಲಹೆ ಮಾಡಿದ್ದಾರೆ.
ಆದರೆ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಏಕೆ ಈ ವಿಚಾರವನ್ನು ಎತ್ತಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ಅವರು ಪ್ರಶ್ನಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾದ ಪ್ರತಿಭಾ ಸಿಂಗ್ ಅವರ ಮಗ. ಇವರ ತಂದೆ ವೀರಭದ್ರ ಸಿಂಗ್ ಆರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
"ಸಮಾನ ನಾಗರಿಕ ಸಂಹಿತೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಭಾರತದ ಏಖತೆ ಮತ್ತು ಸಮಗ್ರತೆಗೆ ಇದು ಅಗತ್ಯ. ಆದರೆ ಇದನ್ನು ರಾಜಕೀಯ ವಿಷಯವಾಗಿಸಬಾರದು" ಎಂದು ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ದಾರೆ. ಆದರೆ ಸಂಸತ್ತಿನಲ್ಲಿ ಒಂಬತ್ತು ವರ್ಷ ಕಾಲ ಸಂಪೂರ್ಣ ಬಹುಮತ ಹೊಂದಿದ್ದ ಎನ್ಡಿಎ ಸರ್ಕಾರ ಇದನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಏಕೆ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಎಸೆದಿದ್ದಾರೆ.
ಭೋಪಾಲ್ನಲ್ಲಿ ಇತ್ತೀಚೆಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಮಾನ ನಾಗರಿಕ ಸಂಹಿತೆ ಜಾರಿಯ ಭರವಸೆ ನೀಡಿ, ಎಲ್ಲ ಧರ್ಮಗಳ ಜನರಿಗೆ ಸಮಾನ ವಿವಾಹ ಕಾನೂನು ಮತ್ತು ವಿಚ್ಛೇದನ ಕಾನೂನು ಜಾರಿಗೆ ತರಲಾಗುವುದು ಎಂದಿದ್ದರು. ಆದರೆ ಬಿಜೆಪಿ ಜನತೆಯನ್ನು ವಿಭಜಿಸಲು ಹೊರಟಿದೆ ಎಂದು ಆಪಾದಿಸಿ ಕಾಂಗ್ರೆಸ್ ಈ ನಡೆಯನ್ನು ವಿರೋಧಿಸಿತ್ತು.