AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರತಿಭಟನೆ | ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ದಿಲ್ಲಿ ಪೊಲೀಸರ 20 ಸಿಬ್ಬಂದಿಯನ್ನು ವಶಕ್ಕೆ ಪಡೆದ ಹಿಮಾಚಲ ಪ್ರದೇಶ ಪೊಲೀಸರು
PC: x.com/ANI
ಶಿಮ್ಲಾ, ಫೆ.26: ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭ ನಡೆದ ಪ್ರತಿಭಟನೆಗೆ ಸಂಬಂಧಿಸಿ ರೋಹ್ರುವಿನ ಮೂವರು ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಹಿಮಾಚಲ ಪ್ರದೇಶಕ್ಕೆ ಬಂದಿದ್ದ ದಿಲ್ಲಿಯ ಪೊಲೀಸರ ತಂಡವನ್ನು ರಾಜ್ಯ ಪೊಲೀಸರು ಧರಂಪುರ ಬಳಿ ತಡೆದು ಕನಿಷ್ಠ 20 ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ವೇಳೆ ಯುವ ಕಾಂಗ್ರೆಸ್ ನಾಯಕರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ತಂಡ ರೋಹ್ರುಗೆ ಆಗಮಿಸಿತ್ತು. ಅಲ್ಲಿಂದ ಮೂವರು ನಾಯಕರನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯುವ ವೇಳೆ ಧರಂಪುರ ಸಮೀಪ ಹಿಮಾಚಲ ಪೊಲೀಸರು ವಾಹನವನ್ನು ತಡೆದಿದ್ದಾರೆ. ಬಳಿಕ ದಿಲ್ಲಿ ಪೊಲೀಸರನ್ನೂ ಹಾಗೂ ಬಂಧಿತ ನಾಯಕರನ್ನೂ ಶಿಮ್ಲಾಕ್ಕೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಲನ್ ಜಿಲ್ಲೆಯ ಎಸ್ಪಿ ತಿರುಮಲರಾಜು ಎಸ್.ಡಿ. ವರ್ಮಾ ಘಟನೆಯ ಬಗ್ಗೆ ಮಾಹಿತಿ ಪಡೆದಿರುವುದನ್ನು ದೃಢಪಡಿಸಿದ್ದಾರೆ. ಶಿಮ್ಲಾ ಪೊಲೀಸರ ಮನವಿಯ ಮೇರೆಗೆ ಧರಂಪುರ ಬಳಿ ನಾಕಾಬಂಧಿ ತಪಾಸಣೆಗಳನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಕುರಿತು ರಾಜ್ಯದ ಡಿಜಿಪಿ ಪ್ರತಿಕ್ರಿಯೆ ನೀಡಿಲ್ಲ.
ಈ ಘಟನೆಗೆ ಪ್ರತಿಕ್ರಿಯಿಸಿದ ಎಐಸಿಸಿ ವಕ್ತಾರ ಹಾಗೂ ಥಿಯೋಗ್ ಶಾಸಕ ಕುಲದೀಪ್ ರಾಥೋಡ್, ಹಿಮಾಚಲ ಸದನದ ಮೇಲೆ ದಾಳಿ ನಡೆಸಿದ ಆರೋಪದಡಿ ದಿಲ್ಲಿ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯುವ ಕಾಂಗ್ರೆಸ್ ನಾಯಕರ ವಿರುದ್ಧ ಕೈಗೊಂಡ ಕ್ರಮವು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
“ವಾರೆಂಟ್ ಇಲ್ಲದೆ ಆವರಣದ ಮೇಲೆ ದಾಳಿ ನಡೆಸುವುದು ಗೌಪ್ಯತೆಯ ಸ್ಪಷ್ಟ ಉಲ್ಲಂಘನೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ದಿಲ್ಲಿ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೇಶವು ಒಂದು ಪಕ್ಷದ ಆಸ್ತಿಯಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, “ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ವಿರೋಧ ಪಕ್ಷದ ಕರ್ತವ್ಯ ಜನರ ಧ್ವನಿಯನ್ನು ಎತ್ತುವುದು,” ಎಂದು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ದೊಡ್ಡ ವಿಷಯವನ್ನಾಗಿ ಮಾಡಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 20ರಂದು ಯುಎಸ್–ಭಾರತ ವ್ಯಾಪಾರ ಒಪ್ಪಂದ ಹಾಗೂ ರೈತರು ಮತ್ತು ಯುವಕರ ಮೇಲೆ ಅದರ ಪರಿಣಾಮದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟಿಸಿದ್ದರು ಎಂದು ರಾಥೋಡ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ಉದ್ಯೋಗ ಕಡಿತದಿಂದ ಯುವಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹಾನಿಗೊಳಿಸಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ರಾಥೋಡ್ ಖಂಡಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ರಾಷ್ಟ್ರವಿರೋಧಿಯೇ?” ಎಂದು ಪ್ರಶ್ನಿಸಿದ ಅವರು, “ಪ್ರಧಾನಿಯ ವಿರುದ್ಧ ಮಾತನಾಡಿದವರನ್ನು ರಾಷ್ಟ್ರವಿರೋಧಿ ಎಂದು ಗುರುತಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ,” ಎಂದು ಹೇಳಿದ್ದಾರೆ.
“ಭಾರತದ ಘನತೆ ಪ್ರತಿಭಟನಾಕಾರರು ಹಾಗೂ ಸರ್ಕಾರ ಎರಡರ ಜವಾಬ್ದಾರಿಯಾಗಿದೆ,” ಎಂದು ಅವರು ತಿಳಿಸಿದ್ದಾರೆ.