×
Ad

Himachal Pradesh | 500 ಅಡಿ ಆಳದ ಕಣಿವೆಗೆ ಉರುಳಿ ಬಿದ್ದ ಖಾಸಗಿ ಬಸ್: 12 ಮಂದಿ ಮೃತ್ಯು; 35 ಮಂದಿಗೆ ಗಾಯ

Update: 2026-01-09 22:56 IST

photo:timesofindia

ಹೊಸದಿಲ್ಲಿ: ಶುಕ್ರವಾರ ಖಾಸಗಿ ಬಸ್‌ವೊಂದು ಕಣಿವೆಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಉರುಳಿದ ಪರಿಣಾಮ, 12 ಮಂದಿ ಮೃತಪಟ್ಟಿದ್ದು, ಕನಿಷ್ಠ 35 ಮಂದಿಗೆ ಗಾಯಗಳಾಗಿವೆ. ಈ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಗಢ ಮಾರ್ಗವಾಗಿ ಶಿಮ್ಲಾದಿಂದ ಕುಪ್ವಿಗೆ ತೆರಳುತ್ತಿದ್ದ ಬಸ್, ನಹಾನ್‌ ನಿಂದ ಸುಮಾರು 95 ಕಿಮೀ ದೂರದಲ್ಲಿರುವ ಹರಿಪುರ್ಧರ್ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಪಲ್ಟಿಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದರಿಂದ, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್‌ ನ ಒಟ್ಟಾರೆ ಆಸನ ಸಾಮರ್ಥ್ಯ 39 ಮಾತ್ರವಿದ್ದರೂ, ಆಸನ ಸಾಮರ್ಥ್ಯ ಮೀರಿ ಪ್ರಯಾಣಿಕರು ಇದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ತುರ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನ, ಸ್ಥಳೀಯ ನಿವಾಸಿಗಳು ಹಾಗೂ ದಾರಿಹೋಕರು ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ನೆರವು ನೀಡುತ್ತಿರುವ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿರ್ಮೌರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶ್ಚಿಂತ್ ಸಿಂಗ್ ನೇಗಿ, “ಬಸ್ ಅಪಘಾತದಲ್ಲಿ ಈವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಅಪಘಾತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ಅಪಘಾತದ ಸುದ್ದಿ ನನ್ನನ್ನು ತೀವ್ರವಾಗಿ ದುಃಖ ತಂದಿದೆ. ಅಪಘಾತದಲ್ಲಿ ತಮ್ಮ ಜೀವ ಕಳೆದುಕೊಂಡವರಿಗೆ ನನ್ನ  ಸಂತಾಪಗಳು. ದುಃಖಿತ ಕುಟುಂಬಗಳಿಗೆ ನನ್ನ ಸಂಪೂರ್ಣ ಸಹಾನುಭೂತಿ” ಎಂದು ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪಘಾತದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೂಡ ಸಂತಾಪ ವ್ಯಕ್ತಪಡಿಸಿದ್ದು, “ಈ ಅಪಘಾತ ತೀವ್ರ ಆಘಾತ ತಂದಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News