×
Ad

ಕಾಶ್ಮೀರಿ ವ್ಯಾಪಾರಿಗಳನ್ನು ಬೆದರಿಸಿ ‘ಜೈ ಶ್ರೀರಾಮ್’‌ ಘೋಷಣೆ ಕೂಗುವಂತೆ ಬಲವಂತಗೊಳಿಸಿದ್ದ ಮಹಿಳೆ ಕ್ಷಮಾಯಾಚನೆ

Update: 2024-11-27 17:12 IST

Screengrab: X

ಶಿಮ್ಲಾ: ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಶಾಲುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕಾಶ್ಮೀರಿ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಿದ್ದ ಮತ್ತು ‘ಜೈ ಶ್ರೀರಾಮ್’ ಎಂದು ಕೂಗುವಂತೆ ಬಲವಂತಗೊಳಿಸಿದ್ದ ಮಹಿಳೆಯೋರ್ವರು ತನ್ನ ಕೃತ್ಯಕ್ಕಾಗಿ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಪೋಲಿಸರು ಮಹಿಳೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯ ವರ್ತನೆ ವೀಡಿಯೊದಲ್ಲಿ ಸೆರೆಯಾಗಿತ್ತು.

ಆರೋಪಿ ಗಂದೇರ್ ಪಂಚಾಯತ್ ನಿವಾಸಿ ಹಾಗೂ ಬ್ಲಾಕ್ ಅಭಿವೃದ್ಧಿ ಸಮಿತಿ (ಬಿಡಿಸಿ) ಸದಸ್ಯೆ ಸುಷ್ಮಾ ದೇವಿ ಹಾಗೂ ಶಾಲು ವ್ಯಾಪಾರಿಗಳಾದ ಕಾಶ್ಮೀರದ ಕುಪ್ವಾರಾ ನಿವಾಸಿಗಳಾದ ಅಲಿ ಮುಹಮ್ಮದ್ ಮಿರ್(50) ಮತ್ತು ಅವರ ಪುತ್ರ ಫಿರ್ದೌಸ್ ಅಹ್ಮದ್ ಮಿರ್(20) ಅವರು ಲಿಖಿತ ರಾಜಿಪತ್ರವನ್ನು ಸಲ್ಲಿಸಿದ್ದರೂ ಪೋಲಿಸರು ದೇವಿ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿಲ್ಲ.

‘ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ, ಉದ್ದೇಶಪೂರ್ವಕವಾಗಿ ಅಥವಾ ಅನುದ್ದಿಷ್ಟವಾಗಿ ಏನಾದರೂ ತಪ್ಪು ಮಾತುಗಳನ್ನು ಹೇಳಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ದೇವಿ ಅವರು ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹಾಮಿ ಹಂಚಿಕೊಂಡಿರುವ ವೀಡಿಯೊ ತುಣುಕಿನಲ್ಲಿ ಹೇಳಿದ್ದಾರೆ.

ಖುಹಾಮಿ ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ವೀಡಿಯೊದಲ್ಲಿ, ದೇವಿ ತನ್ನ ಗ್ರಾಮಕ್ಕೆ ಬರಬೇಡಿ ಎಂದು ವ್ಯಾಪಾರಿಗಳಿಗೆ ಹೇಳಿದ್ದರು ಮತ್ತು ನೀವು ಹಿಂದುಸ್ಥಾನಿಗಳೆಂದು ಸಾಬೀತುಗೊಳಿಸಲು ‘ಜೈ ಶ್ರೀರಾಮ’ಎಂದು ಕೂಗುವಂತೆ ಒತ್ತಾಯಿಸಿದ್ದರು. ‘ನೀವು ಜೈ ಶ್ರೀರಾಮ ಎಂದು ಕೂಗುವಂತೆ ನಮಗೆ ಹೇಳುತ್ತಿದ್ದೀರಿ, ಆದರೆ ನಮ್ಮ ಧರ್ಮವು ವಿಭಿನ್ನವಾಗಿದೆ. ಯಾರಾದರೂ ನಿಮಗೆ ʼಕಲಿಮಾʼ ಹೇಳುವಂತೆ ಒತ್ತಾಯಿಸಿದರೆ ನೀವು ಅದನ್ನು ಮಾಡುತ್ತಿರಾ?’ ಎಂದು ವ್ಯಾಪಾರಿಗಳಲ್ಲೋರ್ವ ಪ್ರಶ್ನಿಸಿದ್ದು ವೀಡಿಯೊದಲ್ಲಿ ಕೇಳಿಬಂದಿದೆ.

ಈ ಇಬ್ಬರು ಕಾಶ್ಮೀರಿಗಳಿಂದ ಏನನ್ನೂ ಖರೀದಿಸಿದಂತೆ ದೇವಿ ಇತರರಿಗೂ ಸೂಚಿಸಿದ್ದರು. ತನ್ನ ಪ್ರದೇಶಕ್ಕೆ ಬರದಂತೆ ವ್ಯಾಪಾರಿಗಳಿಗೆ ಅವರು ಎಚ್ಚರಿಕೆಯನ್ನೂ ನೀಡಿದ್ದರು. ಈ ಬಗ್ಗೆ ಅಲಿ ಮುಹಮ್ಮದ್ ಮಿರ್ ಪೋಲಿಸ್ ದೂರನ್ನು ದಾಖಲಿಸಿದ್ದರು.

ಗಂದೇರ್ ಪಂಚಾಯತ್‌ನ ಸರಪಂಚರಾದ ಪಿಂತಾ ದೇವಿ ಬಿಡಿಸಿ ಸದಸ್ಯೆದೇವಿಯವರ ಕೃತ್ಯವನ್ನು ಖಂಡಿಸಿದ್ದಾರೆ.

‘ನಾವು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ದೇವಿ ಚುನಾಯಿತ ಪ್ರತಿನಿಧಿಯಾಗಿದ್ದಾರೆ ಮತ್ತು ಆಡಳಿತವು ಅವರ ವಿರುದ್ಧ ಕ್ರಮ ತೆಗೆದುಕೊಳುತ್ತದೆ’ ಎಂದು ಕಾಂಗ್ರಾ ಜಿಲ್ಲಾಧಿಕಾರಿ ಹೇಮರಾಜ ಬೈರ್ವಾ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News