ಬಾನು ಮುಷ್ತಾಕ್‌ಗೆ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ: ಅಭಿನಂದಿಸಿದ ರಾಹುಲ್ ಗಾಂಧಿ; ಪ್ರಧಾನಿ ಮೋದಿ ಮೌನಕ್ಕೆ ಜನರ ಟೀಕೆ
Photo credit: PTI
ಬೆಂಗಳೂರು: ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಯನ್ನು ಲಂಡನ್ ನಲ್ಲಿ ಸ್ವೀಕರಿಸಿದ್ದು, ಹಲವು ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.
ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಕಾದಂಬರಿಗಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದ್ದು, ಇದು ಕನ್ನಡ ಸಾಹಿತ್ಯಕ್ಕೆ ಮತ್ತು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂಚಿನಲ್ಲಿರುವವರ ಕಥೆಗಳನ್ನು ಪ್ರಾಮಾಣಿಕವಾಗಿ ಹೇಳಿದಾಗ ಜಗತ್ತಿಗೆ ತಲುಪಬಹುದು ಎಂಬುದಕ್ಕೆ ಇದು ಹೆಮ್ಮೆಯ ದೃಢೀಕರಣವಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದರು.
ಇದೇ ವೇಳೆ, ಭಾರತದ ಲೇಖಕಿಯೊಬ್ಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದ್ದರೂ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈವರೆಗೂ ಏನೂ ಪ್ರತಿಕ್ರಿಯಿಸದ್ದಕ್ಕೆ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಲೇಖಕ, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು “ಸಾಹಿತಿಗಳಿಗೆ ನೀಡಲಾಗುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಎನ್ನುವುದೊಂದು ಇದೆ. ಈ ಪ್ರಶಸ್ತಿಯನ್ನು ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಯ ಹೆಣ್ಣುಮಗಳೊಬ್ಬಳು ಪಡೆದಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕೆಂದು ನಮ್ಮ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರಿಗೆ ಯಾರಾದರೂ ಬುದ್ದಿ ಹೇಳಬಾರದಾ?” ಎಂದು ಟೀಕಿಸಿದ್ದಾರೆ.