ʼಹಾರ್ಲಿಕ್ಸ್ʼ ಇನ್ನು ಮುಂದೆ ‘ಆರೋಗ್ಯ ಪೇಯ’ವಲ್ಲ... ಆಗಿದ್ದೇನು?
Horlicks | PC : horlicks.in
ಹೊಸದಿಲ್ಲಿ: ಹಾರ್ಲಿಕ್ಸ್ ಮತ್ತು ಬೂಸ್ಟ್‌ನಂತಹ ಬಹು ಬ್ರ್ಯಾಂಡ್‌ಗಳನ್ನು ಹೊಂದಿರುವ ಹಿಂದುಸ್ಥಾನ ಯುನಿಲಿವರ್ ಲಿ.(ಎಚ್‌ಯುಎಲ್) ತನ್ನ ‘ಆರೋಗ್ಯ ಪೇಯ ’ವರ್ಗವನ್ನು ಮರುಬ್ರ್ಯಾಂಡ್ ಮಾಡಿದೆ. ಕಂಪನಿಯು ತನ್ನ ‘ಆರೋಗ್ಯ ಆಹಾರ ಪೇಯ’ಗಳ ವರ್ಗವನ್ನು ‘ಕ್ರಿಯಾತ್ಮಕ ಪೌಷ್ಟಿಕ ಪೇಯಗಳು(ಎಫ್‌ಎನ್‌ಡಿ) ’ಎಂದು ಮರುನಾಮಕರಣಗೊಳಿಸಿದೆ ಮತ್ತು ಹಾರ್ಲಿಕ್ಸ್‌ನಿಂದ ‘ಆರೋಗ್ಯ’ ಲೇಬಲ್‌ನ್ನು ಕೈಬಿಟ್ಟಿದೆ.
ಪೇಯಗಳು ಮತ್ತು ಪಾನೀಯಗಳನ್ನು ‘ಆರೋಗ್ಯ ಪೇಯ’ ವರ್ಗದಿಂದ ತೆಗೆಯುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಸೂಚಿಸಿದ ಬಳಿಕ ಎಚ್‌ಯುಎಲ್ ಈ ಕ್ರಮವನ್ನು ಕೈಗೊಂಡಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದ ಎಚ್‌ಯುಎಲ್‌ನ ಮುಖ್ಯ ಹಣಕಾಸು ಅಧಿಕಾರಿ ರಿತೇಶ್ ತಿವಾರಿಯವರು,ಈ ಬದಲಾವಣೆಯು ಪಾನೀಯ ವರ್ಗದ ಹೆಚ್ಚು ನಿಖರವಾದ ಮತ್ತು ಪಾರದರ್ಶಕ ವಿವರಣೆಯನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು.
ಎಚ್‌ಯುಎಲ್ ಪ್ರಕಾರ ಕ್ರಿಯಾತ್ಮಕ ಪೌಷ್ಟಿಕ ಪೇಯಗಳ ವರ್ಗವು ಸಮುದಾಯದ ಪ್ರೋಟಿನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.
ಎಫ್‌ಎನ್‌ಡಿಯನ್ನು ಸಸ್ಯ,ಪ್ರಾಣಿ,ಸಮುದ್ರ ಮತ್ತು ಸೂಕ್ಷ್ಮಜೀವಿಗಳ ವರ್ಗದಿಂದ ಯಾವುದೇ ಜೈವಿಕ ಸಕ್ರಿಯ ಘಟಕವನ್ನು ಸೇರಿಸುವುದರ ಮೂಲಕ ಹೆಚ್ಚುವರಿ ಆರೋಗ್ಯ ಲಾಭಗಳನ್ನು ಒದಗಿಸುವ ಅಲ್ಕೋಹಾಲೇತರ ಪಾನೀಯ ಎಂದು ವ್ಯಾಖ್ಯಾನಿಸಬಹುದು.
ಇನ್‌ಸ್ಟಿಟ್ಯೂಟ್ ಫಾರ್ ಇಂಟಿಗ್ರೇಟಿವ್ ನ್ಯೂಟ್ರಿಷನ್ ಪ್ರಕಾರ ಕ್ರಿಯಾತ್ಮಕ ಪೋಷಣೆಯು ಆಹಾರದ ಸಮಗ್ರವಿಧಾನವಾಗಿದೆ. ಇದು ವ್ಯಕ್ತಿಗಳ ಆಹಾರ ಆಯ್ಕೆಯ ಮೇಲೆ ಪರಿಣಾಮ ಬೀರಬಹುದಾದ ಅವರ ಜೀವನಶೈಲಿಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆ 2006ರಡಿ ಆರೋಗ್ಯ ಪೇಯಗಳ ಸ್ಪಷ್ಟ ವ್ಯಾಖ್ಯಾನದ ಅನುಪಸ್ಥಿತಿಯಲ್ಲಿ ಈ ನಿಯಂತ್ರಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಬೋರ್ನವಿಟಾ ಮತ್ತು ಹಾರ್ಲಿಕ್ಸ್‌ನಂತಹ ಪೇಯಗಳಲ್ಲಿ ಅಧಿಕ ಸಕ್ಕರೆ ಮಟ್ಟದ ಕುರಿತು ಕಳವಳಗಳು ವ್ಯಕ್ತಗೊಂಡ ನಂತರ ಈ ಬೆಳವಣಿಗೆಗಳು ನಡೆದಿವೆ.
ಹಾರ್ಲಿಕ್ಸ್‌ನಂತೆ ದೇಶದ ಇನ್ನೊಂದು ಜನಪ್ರಿಯ ಮಾಲ್ಟೆಡ್ ಪಾನೀಯವಾದ ಕ್ಯಾಡಬರಿಯ ಬೋರ್ನವಿಟಾ ಕೂಡ ಅದರಲ್ಲಿಯ ಅಧಿಕ ಸಕ್ಕರೆ ಮಟ್ಟವನ್ನು ಸಾಮಾಜಿಕ ಮಾಧ್ಯಮ ಪ್ರಭಾವಿ ಫುಡ್ ಫಾರ್ಮರ್ ಎತ್ತಿ ತೋರಿಸಿದ ಬಳಿಕ ಇದೇ ಕ್ರಮವನ್ನು ಎದುರಿಸಿತ್ತು.
ಬಳಿಕ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರಕ್ಕೆ ವಿಚಾರಣೆಯನ್ನು ಕಳುಹಿಸಿದ್ದು,ಇದು ಇ-ಕಾಮರ್ಸ್ ಸಂಸ್ಥೆಗಳಿಗೆ ಕೇಂದ್ರದ ಆದೇಶಕ್ಕೆ ಕಾರಣವಾಗಿತ್ತು.