ಕೊನೆಯ ʼನಿಮಿಷʼದಲ್ಲಿ ಗಲ್ಲು ಶಿಕ್ಷೆ ಮುಂದೂಡಿದ್ದು ಹೇಗೆ ? ಎ ಪಿ ಉಸ್ತಾದ್ ಹೇಳಿದ್ದೇನು ?
ನಿಮಿಷಪ್ರಿಯಾ - ಎ ಪಿ ಉಸ್ತಾದ್
ಯೆಮನ್ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷ ಪ್ರಿಯಾಳ ಮರಣದಂಡನೆಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಪುದುಪ್ಪಳ್ಳಿ ಶಾಸಕ ಚಾಂಡಿ ಉಮ್ಮನ್ ಕಳೆದ ಶುಕ್ರವಾರ ನನ್ನನ್ನು ಸಂಪರ್ಕಿಸಿದ್ದರು. ಯೆಮನ್ ನ ಸೂಫಿ ವಿದ್ವಾಂಸರು ನನಗೆ ಆಪ್ತರು ಎಂದು ಉಮ್ಮನ್ ಅವರು ಈ ಮನವಿಯನ್ನು ನನ್ನ ಮುಂದಿಟ್ಟಿದ್ದರು ಎಂದು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್, ಕೊನೆಯ ʼನಿಮಿಷʼದಲ್ಲಿ ಗಲ್ಲು ಶಿಕ್ಷೆ ಮುಂದೂಡಿದ ಪ್ರಕರಣದ ಬೆಳವಣಿಗೆಯನ್ನು ವಿವರಿಸಿದ್ದಾರೆ.
ವಿದೇಶದಲ್ಲಿ ಭಾರತೀಯ ಪ್ರಜೆಯೊಬ್ಬರು ಮರಣದಂಡನೆಗೆ ಕಾಯುತ್ತಿರುವಾಗ, ಮಾನವೀಯ ಪರಿಹಾರವನ್ನು ಕಂಡುಕೊಳ್ಳಲು ಮಧ್ಯಪ್ರವೇಶಿಸುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂಬ ಅರಿವಿನಿಂದ ನಾನು ಮಧ್ಯಪ್ರವೇಶಿಸಲು ಮುಂದಾದೆ. ಗಲ್ಫ್ ರಾಷ್ಟ್ರಗಳಲ್ಲಿ ಸೇರಿದಂತೆ, ಹಿಂದೆಯೂ ಇಂತಹ ಮಧ್ಯಪ್ರವೇಶಗಳನ್ನು ಮಾಡಲಾಗಿದೆ. ಅದರಲ್ಲಿ ಹಲವು ಯಶಸ್ವಿಯಾಗಿವೆ. ಈ ಪ್ರಕರಣವು ಭಾರತಕ್ಕೆ ಈಗ ಗಣನೀಯ ರಾಜತಾಂತ್ರಿಕ ಸಂಬಂಧಗಳಿಲ್ಲದ ಪ್ರದೇಶವಾಗಿರುವುದರಿಂದ, ಈ ಪ್ರಯತ್ನವು ದೇಶಕ್ಕೆ ಅಗತ್ಯವಾಗಿದೆ ಎಂದು ನಾನು ಭಾವಿಸಿದೆ ಎಂದು ಎ ಪಿ ಉಸ್ತಾದ್ ಹೇಳಿದ್ದಾರೆ.
ಯೆಮನ್ ನ ತರೀಮ್ ನಿಂದ ಬಂದ ನನ್ನ ಆತ್ಮೀಯ ಸ್ನೇಹಿತ, ವಿಶ್ವ ಪ್ರಸಿದ್ಧ ಸೂಫಿ ವಿದ್ವಾಂಸ ಮತ್ತು ಯೆಮನ್ ಮುಸ್ಲಿಮರ ಮೇಲೆ ದೊಡ್ಡ ಪ್ರಭಾವ ಹೊಂದಿರುವ ಹಬೀಬ್ ಉಮರ್ ಬಿನ್ ಹಫೀಳ್ ಅವರೊಂದಿಗೆ ಈ ವಿಷಯವನ್ನು ನಾನು ಚರ್ಚಿಸಿದೆ. ಮಾಹಿತಿಯನ್ನು ಹಂಚಿಕೊಂಡ ತಕ್ಷಣ, ಅವರು ಈ ವಿಷಯವನ್ನು ವಿಚಾರಿಸುವುದಾಗಿಯೂ ಮತ್ತು ಶೀಘ್ರದಲ್ಲೇ ಉತ್ತರಿಸುವುದಾಗಿಯೂ ಹೇಳಿದರು.
ಹಬೀಬ್ ಉಮರ್ ಅವರ ಕಚೇರಿಯು ಉತ್ತರ ಯೆಮನ್ ಸರ್ಕಾರ ಮತ್ತು ಸಂತ್ರಸ್ತನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿ, ಸಮಾಲೋಚನಾ ಪ್ರಯತ್ನಗಳನ್ನು ಪ್ರಾರಂಭಿಸಿತು. ಇದರೊಂದಿಗೆ, ಅವರು ತಮ್ಮ ವೈಯಕ್ತಿಕ ಪರಿಚಯವಿರುವ ನ್ಯಾಯಾಧೀಶರು ಮತ್ತು ಕಾನೂನು ತಜ್ಞರೊಂದಿಗೆ ಸಂವಹನ ನಡೆಸಿ, ಶಿಕ್ಷೆಯನ್ನು ವಿಳಂಬಗೊಳಿಸಲು ಕಾನೂನುಬದ್ಧ ಸಾಧ್ಯತೆಗಳನ್ನು ಅನ್ವೇಷಿಸಿದರು ಎಂದು ಸುಲ್ತಾನುಲ್ ಉಲಮಾ ಇಂಡಿಯನ್ ಗ್ರಾಂಡ್ ಮುಫ್ತಿ ತಮ್ಮ ಪ್ರಯತ್ನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವಿಷಯದಲ್ಲಿ ಪ್ರಮುಖವಾದ ನಡೆ ಶೈಖ್ ಹಬೀಬ್ ಉಮರ್ ಅವರ ನಿರ್ದೇಶನದ ಮೇರೆಗೆ ನಿನ್ನೆ ಉತ್ತರ ಯೆಮನ್ ನಲ್ಲಿ ನಡೆದ ತುರ್ತು ಸಭೆಯಾಗಿತ್ತು. ಹಬೀಬ್ ಉಮರ್ ಅವರ ಪ್ರತಿನಿಧಿ ಹಬೀಬ್ ಅಬ್ದುರ್ರಹ್ಮಾನ್ ಅಲಿ ಮಶ್ಹೂರ್, ಯೆಮನ್ ಸರ್ಕಾರದ ಪ್ರತಿನಿಧಿಗಳು, ಸನಾದ ಜಿನಾಯತ್ ನ್ಯಾಯಾಲಯದ ಸುಪ್ರೀಂ ನ್ಯಾಯಾಧೀಶರು, ಕೊಲ್ಲಲ್ಪಟ್ಟ ತಲಾಲ್ ನ ಸಹೋದರ, ಬುಡಕಟ್ಟು ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು. ಕುಟುಂಬದಲ್ಲಿ ಈ ವಿಷಯವನ್ನು ವಿಶ್ಲೇಷಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ತಲಾಲ್ ನ ಸಂಬಂಧಿಕರು ಸಭೆಯಲ್ಲಿ ತಿಳಿಸಿದರು ಎಂದು ಅವರು ಹೇಳಿದ್ದಾರೆ.
ಮಂಗಳವಾರದ ದಿನವು ಬಹಳ ನಿರ್ಣಾಯಕವಾಗಿತ್ತು. ಬುಡಕಟ್ಟು ನಾಯಕರು ಮತ್ತು ತಲಾಲ್ ನ ಕಾನೂನು ಸಮಿತಿ ಸದಸ್ಯರು ಹಾಗೂ ಕುಟುಂಬಗಳೊಂದಿಗಿನ ಚರ್ಚೆ ಮಂಗಳವಾರ ಬೆಳಿಗ್ಗೆಯೂ ಮುಂದುವರೆಯಿತು. ಈ ವಿಷಯದಲ್ಲಿ ಶುಭ ಸುದ್ದಿ ಬರುವವರೆಗೂ ಹಬೀಬ್ ಅಬ್ದುರ್ರಹ್ಮಾನ್ ಮಶ್ಹೂರ್ ಅವರ ನೇತೃತ್ವದ ಶೈಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿ ತಂಡವು ತಲಾಲ್ ನ ಸ್ಥಳವಾದ ಉತ್ತರ ಯೆಮನ್ ನ ದಮಾರ್‌ನಲ್ಲಿಯೇ ಉಳಿದುಕೊಂಡಿತ್ತು. ಕುಟುಂಬಗಳ ನಡುವೆ ಏಕರೂಪದ ಅಭಿಪ್ರಾಯಕ್ಕೆ ಬರಲು ಪ್ರಯತ್ನಗಳು ಮುಂದುವರಿದಿದ್ದವು ಎಂದು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ವಿವರಿಸಿದ್ದಾರೆ.
ಅದೇ ಸಮಯದಲ್ಲಿ, ಕೊಲ್ಲಲ್ಪಟ್ಟ ತಲಾಲ್ ನ ನಿಕಟ ಸಂಬಂಧಿ ಮತ್ತು ಹುದೈದಾ ರಾಜ್ಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಯೆಮನ್ ಶೂರಾ ಕೌನ್ಸಿಲ್ ಸದಸ್ಯರಾದ ನ್ಯಾಯಮೂರ್ತಿ ಮುಹಮ್ಮದ್ ಬಿನ್ ಅಮೀನ್ ಅವರು ಶೈಖ್ ಹಬೀಬ್ ಉಮರ್ ಅವರ ನಿರ್ದೇಶನದ ಮೇರೆಗೆ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ, ಶಿಕ್ಷೆಯ ಕ್ರಮಗಳನ್ನು ಮುಂದೂಡಲು ಕುಟುಂಬ ಸದಸ್ಯರ ನಡುವೆ ಒಪ್ಪಂದ ಮಾಡಿಕೊಂಡು, ನ್ಯಾಯಾಲಯವನ್ನು ಸಂಪರ್ಕಿಸಿದರು. ಅದರ ನಂತರವೇ ಶಿಕ್ಷೆಯನ್ನು ಮುಂದೂಡಿದ ತೀರ್ಪು ಈಗ ಹೊರಬಿದ್ದಿದೆ ಎಂದು ಎ ಪಿ ಉಸ್ತಾದ್ ಸಂತಸ ವ್ಯಕ್ತಪಡಿಸಿದರು.
ಉತ್ತರ ಯೆಮನ್ ನ ಬುಡಕಟ್ಟು ಸಮುದಾಯಗಳ ನಡುವೆ ಭಾವನಾತ್ಮಕವಾಗಿ ಕೆರಳಿದ ಪ್ರಕರಣ ಇದಾಗಿದೆ. ಹಾಗಾಗಿ, ಇಷ್ಟು ಕಾಲ ಕುಟುಂಬದೊಂದಿಗೆ ಮಾತನಾಡುವುದು ಕೂಡ ಸಾಧ್ಯವಾಗಿರಲಿಲ್ಲ. ಈಗ ಕುಟುಂಬದೊಂದಿಗೆ ಸಂವಹನ ಸಾಧಿಸಲು ಸಾಧ್ಯವಾಗಿದೆ ಮತ್ತು ಯೆಮನ್ ನ ಕಾನೂನು ಕ್ಷೇತ್ರದಲ್ಲಿನ ಪ್ರಮುಖರೂ ಸಹ ಹಬೀಬ್ ಉಮರ್ ಅವರ ಆಸಕ್ತಿಯಿಂದ ಇದರಲ್ಲಿ ಮಧ್ಯಪ್ರವೇಶಿಸಿದರು. ಅದೇ ಈ ವಿಷಯದಲ್ಲಿ ದೊಡ್ಡ ಭರವಸೆ ಎಂದು ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಜುಲೈ 16ರಂದು ಜಾರಿಯಾಗಬೇಕಿದ್ದ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಯೆಮನ್ ಸಾರ್ವಜನಿಕ ಪ್ರಾಸಿಕ್ಯೂಷನ್ ವಿಶೇಷ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾದ ರಿಝ್ವಾನ್ ಅಹ್ಮದ್ ಅಲ್-ವಜ್ರಾ ಮತ್ತು ಸ್ವರೀಮುದ್ದೀನ್ ಮುಫದ್ದಲ್ ಅವರು ಸಹಿ ಮಾಡಿದ ತೀರ್ಪಿನ ಪ್ರತಿಯಲ್ಲಿದೆ. ಕುಟುಂಬದೊಂದಿಗಿನ ಚರ್ಚೆಗಳು ಇನ್ನೂ ಮುಂದುವರೆಯಲಿದೆ. ಮರಣದಂಡನೆಯಿಂದ ಮುಕ್ತಿ ಪಡೆಯುವ ಪ್ರಯತ್ನಗಳು ನಡೆಯಲಿದೆ. ಇಲ್ಲಿಯವರೆಗೆ ಆದಂತೆಯೇ ಈ ವಿಷಯದಲ್ಲೂ ಸಾಮೂಹಿಕ ಕಾರ್ಯಗಳು, ಪ್ರಯತ್ನಗಳು ಮತ್ತು ಪ್ರಾರ್ಥನೆಗಳು ಅವಶ್ಯಕವಾಗಿವೆ. ಈ ವಿಷಯದಲ್ಲಿ ಇದುವರೆಗಿನ ಪ್ರಗತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.