×
Ad

ಲೋಕಸಭೆಯಲ್ಲಿ ಭದ್ರತಾ ವೈಫಲ್ಯ: ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಭಾಗಿ

Update: 2023-12-13 15:13 IST

Photo: PTI

ಹೊಸದಿಲ್ಲಿ: ಲೋಕಸಭೆಯ ಗ್ಯಾಲರಿಯಿಂದ ಇಂದು ಇಬ್ಬರು ಅಪರಿಚಿತರು ಸಂಸದರು ಕುಳಿತಿರುವ ಸ್ಥಳಕ್ಕೆ ಕ್ಯಾನ್‌ಗಳೊಂದಿಗೆ ಜಿಗಿದು ಯಾವುದೋ ಹಳದಿ ಹೊಗೆ ಸಿಂಪಡಿಸಿದ ಘಟನೆ ಆಘಾತ ಮೂಡಿಸಿದೆ ಹಾಗೂ ಈ ಭದ್ರತಾ ಲೋಪ ಹೇಗೆ ನಡೆಯಿತು ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಲೋಕಸಭೆಯ ಸೀಸಿಟಿವಿಯಿಂದ ತಿಳಿದು ಬಂದಂತೆ ಗಾಢ ನೀಲಿ ಶರ್ಟ್‌ ಧರಿಸಿದ ಒಬ್ಬ ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಓಡುತ್ತಿರುವಂತೆಯೇ ಇನ್ನೊಬ್ಬಾತ ಸಂದರ್ಶಕರ ಗ್ಯಾಲರಿಯಿಂದ ನೇತಾಡುತ್ತಾ ಯಾವುದೋ ಹೊಗೆ ಹಳದಿ ಹೊಗೆ ಸಿಂಪಡಿಸಿದ್ದಾನೆ.

ಲೋಕಸಭಾ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಹಿಡಿಯುವಲ್ಲಿ ಸಫಲರಾದರು. ಅವರ ಬಳಿ ಇದ್ದ ಪಾಸ್‌ ಗಮನಿಸಿದಾಗ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿ ನೀಡಿದ ಪಾಸ್‌ಗಳು ಎಂದು ತಿಳಿದು ಬಂದಿವೆ ಎಂದು ಅಮ್ರೋಹ ಸಂಸದ ದಾನಿಶ್ ಅಲಿ ಹೇಳಿದ್ದಾರೆ.

ಆದರೆ ಏನೇ ಆದರೂ ಸಂಸತ್ತಿನೊಳಗೆ ಪ್ರವೇಶಿಸಬೇಕಾದರೆ ಐದು ಹಂತದ ಭದ್ರತೆಯನ್ನು ದಾಟಿ ಬರಬೇಕಿದೆ.

ಸಂಸತ್ತಿನ ಹೊರಗೆ ಕೂಡ ಒಬ್ಬ ಪುರುಷ ಹಾಗೂ ಮಹಿಳೆಯನ್ನು ವಶಪಡಿಸಿಕೊಳ್ಳಲಾಗಿದ್ದು ಅವರ ಬಳಿಯೂ ಕ್ಯಾನ್‌ಗಳಿದ್ದವು ಅವುಗಳಿಂದ ಹಳದಿ ಹೊಗೆ ಹರಡಿಕೊಂಡಿತ್ತು. ಇವರಿಬ್ಬರೂ ಪ್ರತಿಭಟಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರನ್ನು ನೀಲಂ (42) ಮತ್ತು ಅಮೋಲ್‌ ಶಿಂಧೆ (25) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ವಶಪಡಿಸಿ ತನಿಖೆ ನಡೆಸಲಾಗುತ್ತಿದೆ.

ಈ ಭದ್ರತಾ ಲೋಪದ ಬೆನ್ನಲ್ಲೇ ಸದನವನ್ನು ಮುಂದೂಡಲಾಗಿದೆ. ಸಂಸತ್ತಿನಲ್ಲಿ ಶೂನ್ಯ ಅವಧಿ ವೇಳೆ ಘಟನೆ ನಡೆದಿದೆ.

ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿ, “ಮೊದಲು ಯಾರೋ ಬಿದ್ದಿರಬೇಕೆಂದು ತಿಳಿದೆ. ಆದರೆ ಎರಡನೇ ವ್ಯಕ್ತಿಯೂ ಜಿಗಿದಾಗ ಭದ್ರತಾ ಲೋಪ ಎಂದು ತಿಳಿಯಿತು. ಅವರು ಬಿಟ್ಟ ಹೊಗೆ ವಿಷಕಾರಿಯಾಗಿರಬಹುದು,” ಎಂದರಲ್ಲದೆ ತನಿಖೆಗೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News