ದಾರಿ ತಪ್ಪಿ ಬಂದ ಚಿರತೆ | ಮಕ್ಕಳಿಗೆ ಮೂರು ದಿನ ಶಾಲೆಗಳಿಗೆ ರಜೆ
Photo : PTI
ತಿರುಪತ್ತೂರು: ತಮಿಳುನಾಡಿನ ತಿರುಪತ್ತೂರಿನ ಖಾಸಗಿ ಶಾಲೆಯ ಆವರಣಕ್ಕೆ ಶುಕ್ರವಾರ ಚಿರತೆಯೊಂದು ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಚಿರತೆಯ ಹುಟುಕಾಟ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಮುಂದಿನ ಮೂರು ದಿನಗಳ ಕಾಲ ತಿರುಪತ್ತೂರಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದ ಪೋಷಕರು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಶಾಲೆಯ ಆವರಣದಲ್ಲಿ ಚಿರತೆಯನ್ನು ಗಮನಿಸಿದರು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ, ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವಂತೆ ನೋಡಿಕೊಂಡರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಾರಂಭದಲ್ಲಿ ಬಲೆಗಳ ಸಹಾಯದಿಂದ ಚಿರತೆಯನ್ನು ಹಿಡಿಯಲು ಯೋಜನೆ ಹಾಕಿಕೊಂಡೆವು. ಆದರೆ ಚಿರತೆಯು ಕ್ಯಾಂಪಸ್ ನ ಪೊದೆಗಳಲ್ಲಿ ಅಡಗಿಕೊಂಡಿದ್ದರಿಂದ ಆ ಯೋಜನೆ ಕೈ ಬಿಡಲಾಯಿತು. ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
“ಹೊಸೂರಿನಿಂದ ಪಶುವೈದ್ಯಕೀಯ ತಂಡ ಬಂದ ನಂತರ ಚಿರತೆಗೆ ಅರೆವಳಿಕೆ ನೀಡಲಾಗುವುದು. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಇದು ಬೇಟೆಯ ಬೆನ್ನು ಹತ್ತಿ ದಾರಿ ತಪ್ಪಿದ ಚಿರತೆ. ಇಲ್ಲದಿದ್ದರೆ ಚಿರತೆ ಶಾಲಾ ಆವರಣಕ್ಕೆ ಪ್ರವೇಶಿಸಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಅರಣ್ಯಾಧಿಕಾರಿ ಉತ್ತರಿಸಿದರು.
ತಿರುಪತ್ತೂರು ಜಿಲ್ಲಾಧಿಕಾರಿ ಕೆ.ತರ್ಪಗರಾಜ್, ಪೊಲೀಸ್ ವರಿಷ್ಠಾಧಿಕಾರಿ ಆಲ್ಬರ್ಟ್ ಜಾನ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ತರ್ಪಗರಾಜ್, ಚಿರತೆ ಚಲನವಲನ ಖಚಿತ ಪಡಿಸಿಕೊಂಡು ತೀವ್ರ ನಿಗಾ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಚಿರತೆ ಸೆರೆಗೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆ ಮಾಡಿದಾಗಲೆಲ್ಲ ಅದು ತನ್ನ ಸ್ಥಳವನ್ನು ಬದಲಾಯಿಸುತ್ತಲೇ ಇರುತ್ತದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಶಾಲೆಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಶಾಲಾ ಆವರಣದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದರು.