ಹೈದರಾಬಾದ್ | ಉದ್ಯಮಿಯನ್ನು 70 ಬಾರಿ ಇರಿದು ಕೊಲೆ ಮಾಡಿದ ಮೊಮ್ಮಗ
Photo | indiatoday/ gramadeep.org
ಹೈದರಾಬಾದ್ : ಕೈಗಾರಿಕೋದ್ಯಮಿ ವೇಲಮಟಿ ಚಂದ್ರಶೇಖರ ಜನಾರ್ದನ ರಾವ್ ಅವರನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿ ಅವರ ಮೊಮ್ಮಗ ಚಾಕುವಿನಿಂದ 70 ಬಾರಿ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿಲಾರು ಕೀರ್ತಿ ತೇಜ(29) ಈ ಕೃತ್ಯವನ್ನು ಎಸಗಿರುವ ಆರೋಪಿ. ಹೈದರಾಬಾದ್ ನ ಪಂಜಗುಟ್ಟ ಪ್ರದೇಶದ ಮನೆಯಲ್ಲಿ ಈ ಘಟನೆ ನಡೆದಿದೆ. ವೆಲ್ಜನ್ ಗ್ರೂಪ್ ನ ಅಧ್ಯಕ್ಷ ಜನಾರ್ದನ ರಾವ್ ಅವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿದ್ದಾನೆ. ಎರಡನೇ ಮಗಳು ಸರೋಜಾ ತಂದೆಯೊಂದಿಗೆ ಹೈದರಾಬಾದ್ ನ ಸೋಮಾಜಿಗುಡದಲ್ಲಿ ವಾಸಿಸುತ್ತಿದ್ದರು. ಸರೋಜಾ ಮಗ ಕೀರ್ತಿ ತೇಜ್ ಈ ಕೃತ್ಯವನ್ನು ಎಸಗಿದ್ದಾನೆ.
ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಕೀರ್ತಿ ತೇಜ ಇತ್ತೀಚೆಗೆ ಹೈದರಾಬಾದ್ ಗೆ ಮರಳಿದ್ದ. ಕೀರ್ತಿ ತೇಜನಿಗೆ ಪೂರ್ವಜರ ಆಸ್ತಿಯಲ್ಲಿ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವೇಲಮಟಿ ಜನಾರ್ದನ ರಾವ್ ನೀಡಿದ್ದಾರೆ. ಆದರೆ, ಅಜ್ಜ ಆಸ್ತಿ ಹಂಚಿಕೆ ಮಾಡುವಾಗ ಅನ್ಯಾಯ ಮಾಡಿದ್ದಾರೆ ಎಂದು ಕೀರ್ತಿ ತೇಜ ಪದೇ ಪದೇ ಹೇಳುತ್ತಿದ್ದ. ಇದೇ ವಿಚಾರಕ್ಕೆ ಜನಾರ್ದನ ರಾವ್ ಜೊತೆ ಗಲಾಟೆ ಮಾಡಿದ ಕೀರ್ತಿ ತೇಜ, ಅಜ್ಜನಿಗೆ 70 ಬಾರಿ ಚೂರಿಯಿಂದ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ.
ಈ ವೇಳೆ ತೇಜ ತಾಯಿ ಸರೋಜಿನಿ ದೇವಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಆಕೆಯು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಕೃತ್ಯಕ್ಕೆ ಸಂಬಂಧಿಸಿ ತೇಜನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಜನಾರ್ದನ ರಾವ್ ಅವರು ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಕೊಡುಗೈ ದಾನಿಯಾಗಿದ್ದರು ಎಂದು ತಿಳಿದು ಬಂದಿದೆ.