ಹೊಸ ಕೋವಿಡ್ ಪ್ರಬೇಧ ಬಗ್ಗೆ ಹೆಚ್ಚಿದ ಆತಂಕ: ರೋಗಲಕ್ಷಣಗಳೇನು ಗೊತ್ತೇ?
PC: istockphoto
ವಾಷಿಂಗ್ಟನ್: ಕೋವಿಡ್-19 ಸೋಂಕಿನ ಹೊಸ ಪ್ರಬೇಧವಾದ ಎನ್ ಬಿ.1.1.1 ಚೀನಾದಲ್ಲಿ ವ್ಯಾಪಕವಾಗಿ ಹರಡಿದ ಬಳಿಕ ಇದೀಗ ಅಮೆರಿಕದಲ್ಲಿ ಪತ್ತೆಯಾದ ಬೆನ್ನಲ್ಲೇ ವಿಶ್ವಾದ್ಯಂತ ಹೊಸ ಪ್ರಬೇಧದ ಬಗೆಗಿನ ಆತಂಕ ಹೆಚ್ಚಿದೆ. ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಈ ಹೊಸ ಪ್ರಬೇಧದ ವೈರಸ್ ಸೋಂಕು ಕಂಡುಬಂದಿದೆ.
ಇತ್ತೀಚಿನ ದಿನಗಳಲ್ಲಿ ಇದು ಸ್ಥಳೀಯವಾಗಿ ಹರಡಿರುವ ಹಿನ್ನೆಲೆಯಲ್ಲಿ ಸಮುದಾಯ ಮಟ್ಟದಲ್ಲಿ ಈ ಪ್ರಬೇಧ ಪತ್ತೆಯಾಗಿದೆ.
ಏಷ್ಯಾದ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಈ ಪ್ರಬೇಧದ ವೈರಸ್ ನಿಂದಾಗಿ ಕೋವಿಡ್-19 ಸೋಂಕು ಅಧಿಕವಾಗಿದೆ. ಚೀನಾದಲ್ಲಿ ಕೋವಿಡ್-19 ಸೋಂಕಿನಿಂದಾಗಿ ತೀವ್ರ ಅಸ್ವಸ್ಥರಾಗಿ ಉಸಿರಾಟ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಕಳೆದ ತಿಂಗಳು ಇದ್ದ ಶೇಕಡ 3.3ರಿಂದ ಶೇಕಡ 6.3ಕ್ಕೆ ಹೆಚ್ಚಿದೆ. ಅಂತೆಯೇ ಕೋವಿಡ್-19 ಪಾಸಿಟಿವ್ ಎ & ಇ ರೋಗಿಗಳ ಸಂಖ್ಯೆ ಶೇಕಡ 7.5ರಿಂದ 16.2ಕ್ಕೆ ಹೆಚ್ಚಿದೆ. ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೈವಾನ್ ನಲ್ಲಿ ಶೇಕಡ 78ರಷ್ಟು ಏರಿಕೆಯಾಗಿದೆ.
ಹಾಂಕಾಂಗ್ ನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 12 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಸಾರ್ವಜನಿಕ ಸಾರಿಗೆ ಮತ್ತು ಸಮುದಾಯದ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಪಡಿಸಲಾಗಿದೆ. ಮನುಷ್ಯ ಜೀವಕೋಶಗಳನ್ನ ಹಾನಿ ಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಈ ಪ್ರಬೇಧ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಜತೆಗೆ ಇದರ ಪ್ರಸರಣ ಸಾಧ್ಯತೆಯೂ ಅಧಿಕ ಎನ್ನಲಾಗಿದೆ.
ಹಿಂದಿನ ಪ್ರಬೇಧಗಳ ವೈರಸ್ ಸೋಂಕಿಗಿಂತ ಭಿನ್ನವಾಗಿ ಈ ವೈರಸ್ನ ನಿಂದ ಸೋಂಕಿತರಾದವರಲ್ಲಿ ಕಡಿಮೆ ಮಟ್ಟದ ಹೈಪರ್ ಥರ್ಮಿಯಾ ಪತ್ತೆಯಾಗಿದೆ. ಅಧಿಕ ಜ್ವರದ ಬದಲಾಗಿ, ದೇಹದ ಉಷ್ಣತೆಯಲ್ಲಿ ಕಡಿಮೆ ಏರಿಕೆ ಕಂಡುಬರುತ್ತದೆ. ಬೆವರುವ ಅಥವಾ ವೇಗದ ಉಸಿರಾಟದ ಲಕ್ಷಣಗಳು ಕಾಣಿಸುವುದಿಲ್ಲ.
ಉಳಿದಂತೆ ಗಂಟಲ ಕೆರೆತ, ಕಫ, ಮೂಗಿನ ಸ್ರಾವ ಮತ್ತು ಸೌಮ್ಯ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲ ಮಂದಿಯಲ್ಲಿ ವಾಕರಿಕೆ, ಹಸಿವಿನ ಕೊರತೆ ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಂಡಿವೆ. ನರವ್ಯವಸ್ಥೆಗೆ ಹಾನಿಯಾಗುವುದರಿಂದ ತಲೆನೋವು, ಮಂಪರು ಮತ್ತು ಏಕಾಗ್ರತೆ ಕೊರತೆ ಕೂಡಾ ಕಂಡುಬರುತ್ತದೆ.