ಜಪಾನ್ ಅನ್ನು ಹಿಂದಿಕ್ಕಿದ ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ: ನೀತಿ ಆಯೋಗ
Photo credit: PTI
ಹೊಸದಿಲ್ಲಿ: ಭಾರತವು ಜಪಾನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿವಿಆರ್ ಸುಬ್ರಹ್ಮಣ್ಯಂ ಅವರು ಪ್ರಕಟಿಸಿದ್ದಾರೆ.
ಶನಿವಾರ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯ ಆರ್ಥಿಕತೆಯು ಈಗ ನಾಲ್ಕು ಲಕ್ಷ ಕೋಟಿ ಡಾಲರ್ ಗಳನ್ನು ತಲುಪಿದೆ. ಇದರೊಂದಿಗೆ ನಾವು ಈಗ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದೇವೆ. ಇದನ್ನು ನಾನು ಹೇಳುತ್ತಿಲ್ಲ, ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ದತ್ತಾಂಶಗಳು ಇದನ್ನು ಹೇಳಿವೆ. ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ ನಮಗಿಂತ ದೊಡ್ಡ ಆರ್ಥಿಕತೆಗಳಾಗಿವೆ. ನಮ್ಮ ಯೋಜನೆಗಳೆಲ್ಲ ಕೈಗೂಡಿದರೆ ಇನ್ನೊಂದು ಎರಡೂವರೆ-ಮೂರು ವರ್ಷಗಳಲ್ಲಿ ನಾವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುತ್ತೇವೆ’ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ಐಎಂಎಫ್‌ನ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯ ಎಪ್ರಿಲ್ ಆವೃತ್ತಿಯ ಪ್ರಕಾರ ವಿತ್ತವರ್ಷ 2026ರಲ್ಲಿ ಭಾರತದ ನಾಮಿನಲ್(ನಾಮಮಾತ್ರ) ಜಿಡಿಪಿ ಸುಮಾರು 4,187.017 ಲಕ್ಷ ಕೋಟಿ ಡಾಲರ್ ಗಳನ್ನು ತಲುಪುವ ನಿರೀಕ್ಷೆಯಿದೆ. ಇದು ಜಪಾನಿನ ನಿರೀಕ್ಷಿತ ಜಿಡಿಪಿ 4.186.431 ಲಕ್ಷ ಕೋಟಿ ಡಾಲರ್ ಗಿಂತ ಹೆಚ್ಚು. 2024ರವರೆಗೆ ಭಾರತವು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿತ್ತು.
ಭಾರತವು ಮುಂದಿನ ಎರಡು ವರ್ಷಗಳ ಕಾಲ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಐಎಂಎಫ್ ಬಿಂಬಿಸಿದೆ. ಭಾರತೀಯ ಆರ್ಥಿಕತೆಯು 2025ರಲ್ಲಿ ಶೇ.6.2 ಮತ್ತು 2026ರಲ್ಲಿ ಶೇ.6.3ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇದೇ ವೇಳೆ ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರ ತುಂಬ ಕಡಿಮೆಯಿರಲಿದ್ದು,2025ರಲ್ಲಿ ಶೇ.2.8 ಮತ್ತು 2026ರಲ್ಲಿ ಶೇ.3ರಷ್ಟು ಇರುವ ನಿರೀಕ್ಷೆಯಿದೆ ಎಂದಿರುವ ಐಎಂಎಫ್ ವರದಿಯು ಭಾರತದ ಅಸಾಧಾರಣ ಪ್ರದರ್ಶನವನ್ನು ಎತ್ತಿ ತೋರಿಸಿದೆ ಎಂದು ಸುಬ್ರಹ್ಮಣ್ಯಂ ತಿಳಿಸಿದರು. ಭಾರತದ ಆರ್ಥಿಕತೆಯು ಈಗ ಅತ್ಯಂತ ವೇಗವಾಗಿ ಬೆಳೆಯುವ ಹಂತದಲ್ಲಿದೆ ಎಂದರು.