×
Ad

ಗಂಗಾ ನದಿಗೆ ಬಿದ್ದ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ; ಪೊಲೀಸರಿಂದ ರಕ್ಷಣೆ

Update: 2025-07-25 16:11 IST

Source: X/@uttarakhandcops

ಹರಿದ್ವಾರ: ಭಾರತೀಯ ಪುರುಷರ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಬಿಜೆಪಿ ನಾಯಕ ದೀಪಕ್ ಹೂಡಾ ಗಂಗಾ ನದಿಗೆ ಜಾರಿ ಬಿದ್ದಿರುವ ಘಟನೆ ಹರಿದ್ವಾರದಲ್ಲಿ ಬುಧವಾರ ನಡೆದಿದ್ದು, ಭಾರಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಉತ್ತರಾಖಂಡ ಪೊಲೀಸರು ರಕ್ಷಿಸಿದ್ದಾರೆ ಎಂದು ತಡವಾಗಿ ವರದಿಯಾಗಿದೆ.

ಘಟನೆಯ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ದೀಪಕ್ ಹೂಡಾ, "ನಾನು ನಿಯಮಿತವಾಗಿ ಹರಿದ್ವಾರಕ್ಕೆ ಭೇಟಿ ನೀಡುತ್ತಿರುತ್ತೇನೆ. ನಿನ್ನೆ ಶ್ರಾವಣ ಶಿವರಾತ್ರಿಯಾಗಿತ್ತು. ಹೀಗಾಗಿ, ನಾನಲ್ಲಿಗೆ ಪುಣ್ಯ ಸ್ನಾನ ಮಾಡಲು ತೆರಳಿದ್ದೆ. ಆದರೆ, ನಾನು ಹಳ್ಳವೊಂದಕ್ಕೆ ಜಾರಿ ಬಿದ್ದೆ. ಈ ವೇಳೆ ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ನದಿಯಲ್ಲಿ ಮುಳುಗಲು ಪ್ರಾರಂಭಿಸಿದೆ. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಧಾವಿಸಿದ ರಕ್ಷಣಾ ತಂಡ, ನನ್ನನ್ನು ನೀರಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಯಿತು. ಇದಕ್ಕಾಗಿ ನಾನು ಉತ್ತರಾಖಂಡ ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.

ಉತ್ತರಾಖಂಡ ಪೊಲೀಸರು ದೀಪಕ್ ಹೂಡಾರ ರಕ್ಷಣಾ ಕಾರ್ಯಾಚರಣೆಯ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಸದ್ಯ ನಡೆಯುತ್ತಿರುವ ಕನ್ವರ್ ಯಾತ್ರೆಯಲ್ಲಿ ಯಾತ್ರಾರ್ಥಿಗಳು ನದಿಗೆ ಬೀಳುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ, ಉತ್ತರಾಖಂಡ ಪೊಲೀಸರು ವಿವಿಧ ಘಾಟ್‌ಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News