ವಿದೇಶಗಳಲ್ಲಿ ಭಾರತ ಜನಪ್ರಿಯವಾಗಿದೆ, ಆದರೆ ಮೋದಿ ಅಲ್ಲ: ನೂತನ ಸಮೀಕ್ಷೆ
Narendra Modi. | Photo: PTI
ಹೊಸದಿಲ್ಲಿ: ವಿದೇಶಗಳಲ್ಲಿ ಭಾರತವು ಜನಪ್ರಿಯವಾಗಿದೆ, ಆದರೆ ಜಾಗತಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ಕೆಲಸವನ್ನು ಮಾಡುತ್ತಾರೆ ಎಂಬ ವಿಶ್ವಾಸ ಅಂತರರಾಷ್ಟ್ರೀಯವಾಗಿ ಅಷ್ಟಿಲ್ಲ ಎಂದು ವಾಷಿಂಗ್ಟನ್ ಮೂಲದ ಚಿಂತನ ಚಾವಡಿ ಪ್ಯೂ ರೀಸರ್ಚ್ ಸೆಂಟರ್ (PRC) ಮಂಗಳವಾರ ಬಿಡುಗಡೆಗೊಳಿಸಿರುವ ನೂತನ ಸಮೀಕ್ಷಾ ವರದಿಯು ಹೇಳಿದೆ.
ಫೆಬ್ರವರಿ ಮತ್ತು ಮೇ ನಡುವೆ PRC ನಡೆಸಿದ್ದ ಸಮೀಕ್ಷೆಯು ಭಾರತದ ಜಾಗತಿಕ ಶಕ್ತಿ, ಮೋದಿಯವರ ದೃಷ್ಟಿಕೋನಗಳು ಮತ್ತು ಭಾರತೀಯರು ಇತರ ದೇಶಗಳನ್ನು ಹೇಗೆ ನೋಡುತ್ತಾರೆ ಎನ್ನುವುದರ ಕುರಿತು ಭಾರತ ಮತ್ತು ಇತರ 23 ದೇಶಗಳಲ್ಲಿಯ 30,800ಕ್ಕೂ ಅಧಿಕ ವಯಸ್ಕರ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು.
ಸಮೀಕ್ಷೆ ನಡೆಸಿದ ದೇಶಗಳಲ್ಲಿ ಭಾರತದ ಕುರಿತು ಸಾರ್ವಜನಿಕ ಅಭಿಪ್ರಾಯವು ತುಲನಾತ್ಮಕವಾಗಿ ಸಕಾರಾತ್ಮಕವಾಗಿದೆ ಎನ್ನುವುದನ್ನು ಸಮೀಕ್ಷೆಯು ಕಂಡುಕೊಂಡಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.46ರಷ್ಟು ಜನರು ತಾವು ಭಾರತದ ಕುರಿತು ಅನುಕೂಲಕರ ಅಭಿಪ್ರಾಯವನ್ನು ಹೊಂದಿರುವುದಾಗಿ ಹೇಳಿದ್ದರೆ, ಸುಮಾರು ಶೇ.34ರಷ್ಟು ಜನರು ತಾವು ದೇಶದ ಬಗ್ಗೆ ಪ್ರತಿಕೂಲ ದೃಷ್ಟಿಕೋನವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಶೇ.16ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ. ಇಸ್ರೇಲ್ ನಲ್ಲಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.71ರಷ್ಟು ಜನರು ಭಾರತದ ಕುರಿತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದು, ಸಮೀಕ್ಷೆಗೊಳಗಾದ ಎಲ್ಲ ದೇಶಗಳ ಪೈಕಿ ಇದು ಗರಿಷ್ಠ ಸಂಖ್ಯೆಯಾಗಿದೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಜೊತೆ ಭದ್ರತಾ ಮತ್ತು ಆರ್ಥಿಕ ಸಹಕಾರವನ್ನು ಬಲಗೊಳಿಸುತ್ತಿದೆ.
ಇದೇ ವೇಳೆ ಭಾರತ ಕುರಿತು ಹಿಂದಿನ ಅಭಿಪ್ರಾಯಗಳನ್ನು ಈ ವರ್ಷದ ಸಮೀಕ್ಷೆಯೊಂದಿಗೆ ಹೋಲಿಸಿದಾಗ ಫ್ರಾನ್ಸ್, ಜರ್ಮನಿ, ಸ್ಪೇನ್ ಮತ್ತು ಬ್ರಿಟನ್ ನಂತಹ ಕೆಲವು ಐರೋಪ್ಯ ದೇಶಗಳಲ್ಲಿ ಅವು ಹೆಚ್ಚು ನಕಾರಾತ್ಮಕವಾಗಿವೆ ಎನ್ನುವುದನ್ನು PRC ಕಂಡುಕೊಂಡಿದೆ.
ಮೋದಿಯವರಲ್ಲಿ ಜಾಗತಿಕ ವಿಶ್ವಾಸ ಮಿಶ್ರಿತವಾಗಿದೆ:
ದೇಶದಲ್ಲಿಯ ಚಿತ್ರಣವು ವಿಭಿನ್ನವಾಗಿದೆ. ಸಮೀಕ್ಷೆಗೊಳಗಾದ ಭಾರತೀಯರಲ್ಲಿ ಸುಮಾರು ಶೇ.80ರಷ್ಟು ಜನರು ಮೋದಿಯವರ ಬಗ್ಗೆ ಒಲವು ತೋರಿಸಿದ್ದರೆ, ಸುಮಾರು ಶೇ.20ರಷ್ಟು ಜನರು ಮಾತ್ರ ಮೋದಿಯವರ ಕುರಿತು ನಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ತನ್ನ ಎರಡನೇ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಸಾಗುತ್ತಿದ್ದಾರೆ.
ಆದರೂ, ಸಮೀಕ್ಷೆಗೊಳಗಾದ 12 ಇತರ ದೇಶಗಳಲ್ಲಿ ಪ್ರತಿಕ್ರಿಯಿಸಿದವರ ಪೈಕಿ ಸುಮಾರು ಶೇ.40ರಷ್ಟು ಜನರು ಜಾಗತಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರಿಯಾದ ಹೆಜ್ಜೆಯನ್ನಿಡುವ ಮೋದಿಯವರ ಸಾಮರ್ಥ್ಯದಲ್ಲಿ ವಿಶ್ವಾಸದ ಕೊರತೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ತಮಗೆ ಮೋದಿಯವರಲ್ಲಿ ವಿಶ್ವಾಸವಿದೆ ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ ಸುಮಾರು ಶೇ.37ರಷ್ಟು ಜನರು ಹೇಳಿದ್ದಾರೆ.
ಬ್ರೆಝಿಲ್ ಮತ್ತು ಮೆಕ್ಸಿಕೋದಲ್ಲಿ ಮೋದಿಯವರ ಕುರಿತು ಹೆಚ್ಚಿನ ಟೀಕೆ ವ್ಯಕ್ತವಾಗಿದೆ. ಈ ದೇಶಗಳಲ್ಲಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಮೋದಿಯವರ ಜಾಗತಿಕ ವ್ಯವಹಾರಗಳ ನಿರ್ವಹಣೆಯಲ್ಲಿ ತಾವು ಅತಿಯಾದ ವಿಶ್ವಾಸವನ್ನು ಅಥವಾ ವಿಶ್ವಾಸವನ್ನೇ ಹೊಂದಿಲ್ಲ ಎಂದು ಹೇಳಿದ್ದಾರೆ. ಯುರೋಪ್ ನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಪ್ರಶ್ನೆಯನ್ನು ಕೇಳಲಾಗಿರಲಿಲ್ಲ.
ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ಸಮೀಕ್ಷೆಗೊಳಗಾದವರು ಸಾಮಾನ್ಯವಾಗಿ, ಜಾಗತಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರಿಯಾದ ಹೆಜ್ಜೆಯನ್ನಿಡುವಲ್ಲಿ ಮೋದಿಯವರಲ್ಲಿ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸಿಲ್ಲ. ಇದೇ ವೇಳೆ ಜಪಾನ್ ಮತ್ತು ನೈಜೀರಿಯಾದಲ್ಲಿ ಮೋದಿಯವರ ಬಗ್ಗೆ ಹೆಚ್ಚಿನ ವಿಶ್ವಾಸ ವ್ಯಕ್ತವಾಗಿದ್ದರೆ, ಕೆನ್ಯಾದಲ್ಲಿ ಸಮೀಕ್ಷೆಗೆ ಉತ್ತರಿಸಿದವರು ಜಾಗತಿಕ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಮೋದಿಯವರ ಕುರಿತು ತಾವು ಅತ್ಯಂತ ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಭಾರತ ಮತ್ತು ಜಗತ್ತಿನ ಕುರಿತು ಭಾರತೀಯರ ದೃಷ್ಟಿಕೋನ:
ಭಾರತದ ಜಾಗತಿಕ ಪ್ರಭಾವದ ಬಗ್ಗೆ ಭಾರತೀಯರು ಹೆಚ್ಚು ಧನಾತ್ಮಕವಾಗಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಭಾರತೀಯರ ಪೈಕಿ ಸುಮಾರು ಶೇ.68ರಷ್ಟು ಜನರು ಇತ್ತೀಚಿನ ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಪ್ರಭಾವ ಬಲಗೊಂಡಿದೆ ಎಂದು ಹೇಳಿದ್ದಾರೆ. ಕೇವಲ ಸುಮಾರು ಶೇ.19ರಷ್ಟು ಜನರು ಭಾರತದ ಪ್ರಭಾವ ಕಡಿಮೆಯಾಗಿದೆ ಎಂದು ಭಾವಿಸಿದ್ದಾರೆ.
ಕುತೂಹಲಕಾರಿಯಾಗಿ, ಇತರ ದೇಶಗಳು ಭಾರತದ ಪ್ರಭಾವದ ಕುರಿತು ವಿಭಿನ್ನ ದೃಷ್ಟಿಕೋನಗಳನ್ನು ಹಂಚಿಕೊಂಡಿವೆ. 2022ರಲ್ಲಿ 19 ದೇಶಗಳಲ್ಲಿ ಇದೇ ಪ್ರಶ್ನೆಯನ್ನು ಕೇಳಿದಾಗ ಕೇವಲ ಶೇ.28ರಷ್ಟು ಜನರು ಭಾರತದ ಪ್ರಭಾವ ಹೆಚ್ಚುತ್ತಿದೆ ಎಂದು ಭಾವಿಸಿದ್ದರೆ, ಶೇ.13ರಷ್ಟು ಜನರು ಅದು ದುರ್ಬಲಗೊಳ್ಳುತ್ತಿದೆ ಎಂದು ಹೇಳಿದ್ದರು.
ಸಮೀಕ್ಷೆಗೆ ಉತ್ತರಿಸಿದ ಭಾರತೀಯರ ಪೈಕಿ ಸುಮಾರು ಅರ್ಧದಷ್ಟು ಜನರು ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಹೆಚ್ಚು ಪ್ರಭಾವಿಯಾಗಿದೆ ಎಂದು ಹೇಳಿದ್ದಾರೆ. ಅದರ ಪ್ರಭಾವ ಕುಂದುತ್ತಿದೆ ಎಂದು ಕೇವಲ 14ರಷ್ಟು ಜನರು ಭಾವಿಸಿದ್ದಾರೆ.
ಈ ನಡುವೆ ಸಮೀಕ್ಷೆಗೊಳಗಾದ ಭಾರತೀಯರ ಪೈಕಿ ಶೇ.41ರಷ್ಟು ಜನರು ಇತ್ತೀಚಿನ ವರ್ಷಗಳಲ್ಲಿ ರಶ್ಯಾ ಹೆಚ್ಚು ಪ್ರಭಾವಿಯಾಗಿದೆ ಎಂದು ಭಾವಿಸಿದ್ದರೆ, ಶೇ.21ರಷ್ಟು ಜನರು ಅದರ ಪ್ರಭಾವ ಕ್ಷೀಣಿಸಿದೆ ಎಂದಿದ್ದಾರೆ.
ಜಾಗತಿಕ ವ್ಯವಹಾರಗಳ ಮೇಲೆ ಚೀನಾದ ಪ್ರಭಾವ ಕುರಿತು ಭಾರತೀಯರು ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಸುಮಾರು ಶೇ.38ರಷ್ಟು ಜನರು ಇತ್ತೀಚಿನ ವರ್ಷಗಳಲ್ಲಿ ಚೀನಾ ಹೆಚ್ಚಿನ ಪ್ರಭಾವವನ್ನು ಗಳಿಸಿದೆ ಎಂದು ಹೇಳಿದ್ದರೆ, ಶೇ.31ರಷ್ಟು ಜನರು ಅದರ ಪ್ರಭಾವ ಕಡಿಮೆಯಾಗಿದೆ ಎಂದು ಭಾವಿಸಿದ್ದಾರೆ.
ಸುಮಾರು ಶೇ.67ರಷ್ಟು ಭಾರತೀಯರು ಚೀನಾದ ಬಗ್ಗೆ ನಕಾರಾತ್ಮಕ ಭಾವನೆಯನ್ನು ಹೊಂದಿದ್ದಾರೆ. ಚೀನಾ ಕುರಿತು ಅತ್ಯಂತ ನಕಾರಾತ್ಮಕ ಭಾವನೆಯನ್ನು ಹೊಂದಿರುವವರು ಇದರಲ್ಲಿ ಸೇರಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ. ಇದು ಸಮೀಕ್ಷೆಗೊಳಗಾದ ಎಲ್ಲ ದೇಶಗಳ ಪೈಕಿ ಅತ್ಯಂತ ಹೆಚ್ಚಿನದಾಗಿದೆ.
ಸಮೀಕ್ಷೆಗೆ ಉತ್ತರಿಸಿದ ಭಾರತೀಯರ ಪೈಕಿ ಸುಮಾರು ಶೇ.73ರಷ್ಟು ಜನರು ಪಾಕಿಸ್ತಾನದ ಬಗ್ಗೆ ಕಹಿ ಭಾವನೆಯನ್ನು ಹೊಂದಿದ್ದಾರೆ. 2018ರಲ್ಲಿ PRC ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ ಇಂತಹವರ ಸಂಖ್ಯೆ ಶೇ.5ರಷ್ಟು ಏರಿಕೆಯಾಗಿದೆ. ಪಾಕಿಸ್ತಾನದ ಕುರಿತು ಅತ್ಯಂತ ನಕಾರಾತ್ಮಕ ಅಭಿಪ್ರಾಯ ಹೊಂದಿರುವ ಶೇ.57ರಷ್ಟು ಭಾರತೀಯರು ಇದರಲ್ಲಿ ಸೇರಿದ್ದಾರೆ. ಸುಮಾರು ಶೇ.19ರಷ್ಟು ಜನರು ಪಾಕಿಸ್ತಾನದ ಕುರಿತು ‘ಬಹಳ ಅಥವಾ ಸ್ವಲ್ಪ ಅನುಕೂಲಕರ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.
ಕೃಪೆ: (scroll.in)