×
Ad

ಝೊಮ್ಯಾಟೋದಿಂದ ವಂಚನೆಗೆ ಒಳಗಾದರಾ ಭಾರತೀಯ ಕ್ರಿಕೆಟಿಗ?‌: ಏನಿದು ಪ್ರಕರಣ

Update: 2024-02-25 13:52 IST

Photo: @BCCI 

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವೇಗಿ ದೀಪಕ್ ಚಾಹರ್ ಶನಿವಾರ ಆನ್‍ಲೈನ್ ಆಹಾರ ವಿತರಣಾ ಕಂಪನಿ ಝೊಮ್ಯಾಟೊ ಜತೆಗಿನ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವೇಗದ ಬೌಲರ್ ಘಟನಾವಳಿಗಳನ್ನು ವಿವರಿಸಿದ್ದಾರೆ. "ಭಾರತದಲ್ಲಿ ಹೊಸ ವಂಚನೆ ಬೆಳಕಿಗೆ ಬಂದಿದೆ. ಝೊಮ್ಯಾಟೊದಲ್ಲಿ ಆರ್ಡರ್ ಮಾಡಿದ ಆಹಾರವನ್ನು ವಿತರಿಸಲಾಗಿದೆ ಎಂದು ಆ್ಯಪ್‍ನಲ್ಲಿ ತೋರಿಸಲಾಗುತ್ತಿದೆ. ಆದರೆ ನಾನೇನೂ ಸ್ವೀಕರಿಸಿಲ್ಲ" ಎಂದು ಚಾಹರ್ ಹೇಳಿದ್ದಾರೆ.

"ಝೊಮ್ಯಾಟೊ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡಿದಾಗ, ಆಹಾರ ವಿತರಿಸಲಾಗಿದೆ ಎಂದು ಸಮರ್ಥಿಸಿಕೊಂಡು, ನಾನೇ ಸುಳ್ಳು ಹೇಳುತ್ತಿದ್ದೇನೆ ಎಂದು ತಿಳಿಸಿದರು. ಇಂಥದ್ದೇ ಸಮಸ್ಯೆ ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಬೇಕು ಎನ್ನುವುದು ನನ್ನ ಅನಿಸಿಕೆ. ಝೊಮ್ಯಾಟೊಗೆ ಟ್ಯಾಗ್ ಮಾಡಿ ನಿಮ್ಮ ಕಥೆಯನ್ನು ಹೇಳಿಕೊಳ್ಳಿ" ಎಂದು ಚಾಹರ್ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಸಮಸ್ಯೆ ಬಗ್ಗೆ ಕ್ಷಮೆ ಯಾಚಿಸಿರುವ ಝೊಮ್ಯಾಟೊ ಎಕ್ಸ್‍ನಲ್ಲಿ ಸ್ಪಷ್ಟನೆ ನೀಡಿ, "ಹಾಯ್ ದೀಪಕ್, ನಿಮ್ಮ ಕಹಿ ಅನುಭವದ ಬಗ್ಗೆ ನಮಗೆ ತೀರಾ ಕಳವಳ ಇದೆ. ಯಾವುದೇ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ಉಳಿದಂತೆ ನಾವು ಇಂಥ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಈ ವಿಷಯದ ಬಗ್ಗೆ ತುರ್ತು ಗಮನ ಹರಿಸಿ, ಕ್ಷಿಪ್ರವಾಗಿ ಬಗೆಹರಿಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದೆ.

"ಬಹಳಷ್ಟು ಮಂದಿ ಈ ಸಮಸ್ಯೆ ಎದುರಿಸುತ್ತಿರುವುದರಿಂದ ಈ ವಿಷಯಕ್ಕೆ ಒತ್ತು ನೀಡಿದ್ದೇನೆ. ಆರ್ಡರ್ ಮಾಡಿದ ಹಣವನ್ನು ವಾಪಾಸು ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಸಿವನ್ನು ಹಣದಿಂದ ಪರಿಹರಿಸಲು ಸಾಧ್ಯವಿಲ್ಲ" ಎಂದು ಚಾಹರ್ ಉತ್ತರಿಸಿದ್ದಾರೆ.

"ಈ ಸಮಸ್ಯೆಯ ತೀವ್ರತೆ ಬಗ್ಗೆ ನಮಗೆ ಅರಿವು ಇದೆ. ಈ ಸಮಸ್ಯೆ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ತೃಪ್ತಿ ನಮ್ಮ ಅಂತಿಮ ಗುರಿ. ಈ ಬಗ್ಗೆ ಚರ್ಚಿಸಲು ನಮ್ಮ ತಂಡಕ್ಕೆ ನಿಮ್ಮ ಸಮಯವನ್ನು ನೀಡಿ. ನಿಮ್ಮ ಸಹಕಾರವನ್ನು ಸ್ವಾಗತಿಸುತ್ತೇವೆ" ಎಂದು ಚಾಹರ್ ಅಭಿಪ್ರಾಯಕ್ಕೆ ಮತ್ತೆ ಝೊಮ್ಯಾಟೊ ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News