ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್ ಭೇಟಿ; ಮೆಚ್ಚುಗೆ ಸೂಚಿಸಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ
ಸಾಮಾಜಿಕ ಸಾಮರಸ್ಯ, ಸಹೋದರತ್ವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆ ಶ್ಲಾಘನೀಯ ಎಂದ ಪ್ರಧಾನಿ
ಎ.ಪಿ. ಅಬೂಬಕರ್ ಮುಸ್ಲಿಯಾರ್, ನರೇಂದ್ರ ಮೋದಿ | Photo Credit : X , @narendramodi
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರೊಂದಿಗೆ ನಡೆಸಿದ ಭೇಟಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
“ಗ್ರ್ಯಾಂಡ್ ಮುಫ್ತಿ ಅಬೂಬಕರ್ ಅಹ್ಮದ್ ಸಾಹೇಬ್ ಅವರೊಂದಿಗೆ ಉತ್ತಮ ಸಂವಾದ ನಡೆಯಿತು. ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯವಾಯಿತು. ಸಾಮಾಜಿಕ ಸಾಮರಸ್ಯ, ಸಹೋದರತ್ವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಕೈಗೊಂಡಿರುವ ಪ್ರಯತ್ನಗಳು ಶ್ಲಾಘನೀಯ” ಎಂದು ಮೋದಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಸೋಮವಾರ ಹೊಸದಿಲ್ಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಸಾಮಾಜಿಕ, ಶೈಕ್ಷಣಿಕ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ. ಕೇರಳ ಪ್ರವಾಸದ ವೇಳೆ ಜನರಿಂದ ಬಂದ ಬೇಡಿಕೆಗಳು ಮತ್ತು ಕಳವಳಗಳನ್ನು ಪ್ರಧಾನಿಯವರ ಗಮನಕ್ಕೆ ತಂದಿರುವುದಾಗಿ ಎಪಿ ಉಸ್ತಾದ್ ಫೇಸ್ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಜಂಇಯ್ಯತುಲ್ ಉಲಮಾ ಹಾಗೂ ಮರ್ಕಝ್ ಸಂಸ್ಥೆಗಳ ಸಾಮಾಜಿಕ-ಶೈಕ್ಷಣಿಕ ಕಾರ್ಯಗಳನ್ನು ಪ್ರಧಾನಿ ಮೆಚ್ಚಿದ್ದಾರೆ ಎನ್ನಲಾಗಿದೆ. ವಕ್ಫ್ ವಿಷಯಗಳು, ಅಲ್ಪಸಂಖ್ಯಾತರ ಶಿಕ್ಷಣ ಯೋಜನೆಗಳು, ಐತಿಹಾಸಿಕ ಮಸೀದಿಗಳ ಸಂರಕ್ಷಣೆ ಮತ್ತು ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಕುರಿತೂ ಸಂಕ್ಷಿಪ್ತವಾಗಿ ಚರ್ಚೆ ನಡೆದಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮತ್ತು ಮರ್ಕಝ್ ಪ್ರತಿನಿಧಿಗಳು ಉಪಸ್ಥಿತರಿದ್ದರು.