ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಅಭಿಯಾನ: ವಿದೇಶಕ್ಕೆ ತೆರಳಲಿದೆ ಸರ್ವಪಕ್ಷ ನಿಯೋಗ
PC : ANI
ಹೊಸದಿಲ್ಲಿ: ಭಯೋತ್ಪಾದನೆ ವಿರುದ್ಧ ಮಹತ್ವದ ರಾಜತಾಂತ್ರಿಕ ಅಭಿಯಾನವನ್ನು ಆರಂಭಿಸಿರುವ ಎನ್‌ಡಿಎ ಸರಕಾರವು, ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪುಗಳ ಕುರಿತು ಭಾರತದ ನಿಲುವನ್ನು ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಮನದಟ್ಟು ಮಾಡಲು ಬಹುಪಕ್ಷೀಯ ನಿಯೋಗವೊಂದನ್ನು ವಿದೇಶಕ್ಕೆ ಕಳುಹಿಸಲಿದೆ.
ನಿಯೋಗದಲ್ಲಿ ಎನ್‌ಡಿಎ ಹಾಗೂ ಪ್ರಮುಖ ಪ್ರತಿಪಕ್ಷಗಳ ಸಂಸದರ ಇರಲಿದ್ದಾರೆ. ಅವರೆಲ್ಲಾ ಅಮೆರಿಕ, ಇಂಗ್ಲೆಂಡ್, ಖತರ್ , ಸೌದಿ ಅರೇಬಿಯ, ದಕ್ಷಿಣ ಆಫ್ರಿಕ ಮತ್ತಿತರ ದೇಶಗಳನ್ನು ಸಂದರ್ಶಿಸಲಿದ್ದಾರೆ.
ಈ ನಿಯೋಗಗಳು ತಾವು ಸಂದರ್ಶಿಸುವ ದೇಶಗಳ ವರಿಷ್ಠರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆಗಳನ್ನು ನಡೆಸಲಿವೆ. ʼಆಪರೇಷನ್ ಸಿಂಧೂರ್ʼ ನಡೆಸಿರುವುದರ ಹಿಂದಿರುವ ಭಾರತದ ವೈಚಾರಿಕತೆಯನ್ನು ಅವರಿಗೆ ಮನದಟ್ಟು ಮಾಡುವುದು ಹಾಗೂ ಗಡಿಯಾಚೆಯಿಂದ ಪ್ರಾಯೋಜಿತವಾದ ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲವನ್ನು ಒಗ್ಗೂಡಿಸುವುದು ಈ ನಿಯೋಗದ ಗುರಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎನ್‌ಡಿಎ ಒಕ್ಕೂಟದ ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳ ಪ್ರಮುಖ ನಾಯಕರು ಸೇರಿದಂತೆ ಸಂಸದರ ಬಹುಪಕ್ಷೀಯ ನಿಯೋಗವೊಂದನ್ನು ಈಗಾಗಲೇ ರಚಿಸಲಾಗಿದೆಯೆಂದು ಕೇಂದ ಸರಕಾರದ ಉನ್ನತ ಮೂಲಗಳು ತಿಳಿಸಿವೆ. ನಿಯೋಗದ ಸದಸ್ಯರಾಗಿ ಈಗಾಗಲೇ ಕಾಂಗ್ರೆಸ್‌ನ ಶಶಿತರೂರ್, ಮನೀಶ್ ತಿವಾರಿ, ಎಐಎಂಐಎಂ ಪಕ್ಷದ ನಾಯಕ ಅಸದುದ್ದೀನ್ ಉವೈಸಿ, ಶಿವಸೇನಾ (ಯುಬಿಟಿ)ದ ನಾಯಕಿ, ಪ್ರಿಯಾಂಕಾ ಚತುರ್ವೇದಿ ಅವರನ್ನು ಹೆಸರಿಸಲಾಗಿದೆಯೆಂದು ತಿಳಿದುಬಂದಿದೆ. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಕಿಸ್ತಾನ ಶಾಮೀಲಾಗಿರುವ ಬಗ್ಗೆ ಈ ಸಂಸದರಿಗೆ ವಿವರಿಸಲಾಗುವುದು ಹಾಗೂ ಅದಕ್ಕೆ ಪೂರಕವಾದ ದಾಖಲೆಗಳು ಹಾಗೂ ಪುರಾವೆಗಳನು ಅವರಿಗೆ ಒದಗಿಸಲಾಗುವುದು. ಜಾಗತಿಕ ವೇದಿಕೆಯಲ್ಲಿ ಭಾರತ ಸರಕಾರದ ಮಹತ್ವದ ಹಾಗೂ ಅಭೂತಪೂರ್ವ ರಾಜತಾಂತ್ರಿಕ ದೌತ್ಯ ಇದಾಗಲಿದೆ.
ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಅಮೆರಿಕ ಹಾಗೂ ಬ್ರಿಟನ್ ಗೆ ತೆರಳುವ ಸಂಸದರ ತಂಡದ ನೇತೃತ್ವ ವಹಿಸಲಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಬಲವಾಗಿ ಖಂಡಿಸಿದ್ದ ಎಐಎಂಐಎಂ ಪಕ್ಷದ ನಾಯಕ, ಲೋಕಸಭಾ ಸದಸ್ಯ ಅಸಾದುದ್ದೀನ್ ಉವೈಸಿ, ಅವರು ಸೌದಿ ಅರೇಬಿಯ ಹಾಗೂ ಖತರ್‌ಗೆ ತೆರಳುವ ತಂಡದ ನೇತೃತ್ವ ವಹಿಸಲಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ ತಲಾ 5-6 ಸಂಸದರನ್ನೊಳಗೊಂಡ ಎಂಟು ತಂಡಗಳನ್ನು ರಚಿಸಲಾಗುವುದು. ವಿದೇಶಾಂಗ ಇಲಾಖೆಯ ಅಧಿಕಾರಿ ಹಾಗೂ ಕೇಂದ್ರ ಸರಕಾರದ ಪ್ರತಿನಿಧಿ ಕೂಡ ನಿಯೋಗದಲ್ಲಿರುವರು.
►ಸರ್ವಪಕ್ಷ ನಿಯೋಗ ಸಂದರ್ಶಿಸಲಿರುವ ಪ್ರಮುಖ ರಾಷ್ಟ್ರಗಳು
ಅಮೆರಿಕ, ಇಂಗ್ಲೆಂಡ್, ಸೌದಿ ಆರೇಬಿಯ, ಖತರ್ ಹಾಗೂ ದಕ್ಷಿಣ ಆಫ್ರಿಕ
►ನಿಯೋಗದ ಕಾರ್ಯಗಳೇನು?
ನಿಯೋಗವು ತಾವು ಭೇಟಿ ನೀಡುವ ದೇಶಗಳ ಸರಕಾರಗಳ ಮುಖ್ಯಸ್ಥರು, ಚಿಂತನಚಿಲುಮೆಗಳನ್ನು, ಮಾಧ್ಯಮ ಸಂಸ್ಥೆಗಳನ್ನು ಹಾಗೂ ಇತರ ಸಂಬಂಧಿತರನ್ನು ಭೇಟಿಯಾಗಲಿದ್ದು, ಅಪರೇಶನ್ ಸಿಂಧೂರ್ ಕಾರ್ಯಾಚರಣೆಯ ಯಾಕೆ ಅಗತ್ಯವಾಗಿತ್ತು ಎಂಬುದನ್ನು ವಿವರಿಸಲಿದ್ದಾರೆ ಹಾಗೂ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನವು ಉಗ್ರರ ಜೊತೆ ಕೈಜೋಡಿಸಿರುವ ಬಗ್ಗೆಯೂ ಅದು ಪುರಾವೆಗಳನ್ನು ಮುಂದಿಡಲಿದೆ ಎನ್ನಲಾಗಿದೆ.