×
Ad

ಇಂದಿರಾ ಗಾಂಧಿಯವರ 1973ರ ಮುಂಗಡಪತ್ರವನ್ನು ‘ಕರಾಳ ಬಜೆಟ್ ’ಎಂದೇಕೆ ಕರೆಯಲಾಗಿತ್ತು?; ಇಲ್ಲಿದೆ ಮಾಹಿತಿ...

Update: 2025-01-30 18:06 IST

ಇಂದಿರಾ ಗಾಂಧಿ | PTI 

ಹೊಸದಿಲ್ಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು 2025ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸಲು ಸಜ್ಜಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರಕಾರದ ಮೂರನೇ ಅವಧಿಯ ಆರ್ಥಿಕ ಮಾರ್ಗಸೂಚಿಗಾಗಿ ದೇಶವು ಕಾಯುತ್ತಿರುವ ಈ ಸಂದರ್ಭದಲ್ಲಿ 1973-74ನೇ ಸಾಲಿನ ಬಜೆಟ್‌ನತ್ತ ಒಮ್ಮೆ ಹಿಂದಿರುಗಿ ನೋಡಿದರೆ ಭಾರತದ ಅತ್ಯಂತ ಕಠಿಣ ಆರ್ಥಿಕ ಸವಾಲುಗಳ ಅವಧಿಗಳನ್ನು ಅನಾವರಣಗೊಳಿಸುತ್ತದೆ.

ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಆಗಿನ ವಿತ್ತಸಚಿವ ಯಶವಂತರಾವ್ ಚವಾಣ ಅವರು ಮಂಡಿಸಿದ್ದ 1973-74ರ ಮುಂಗಡಪತ್ರವು 550 ಕೋಟಿ ರೂ.ಗಳ ಹಿಂದೆಂದೂ ಕಾಣದಿದ್ದ ವಿತ್ತೀಯ ಕೊರತೆಯೊಂದಿಗೆ ‘ಕರಾಳ ಬಜೆಟ್’ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಆಗಿನ ಕಾಲದಲ್ಲಿ ಇದು ಬಹು ದೊಡ್ಡ ಮೊತ್ತವಾಗಿದ್ದು, ಪಾಕಿಸ್ತಾನದೊಂದಿಗೆ 1971ರ ಯುದ್ಧದ ಬಳಿಕ ಭಾರತವು ಎದುರಿಸುತ್ತಿದ್ದ ಗಂಭೀರ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸಿತ್ತು.

ಯುದ್ಧವು ಸರಕಾರದ ಸಂಪನ್ಮೂಲಗಳನ್ನು ಬರಿದಾಗಿಸಿತ್ತು ಮತ್ತು ಬರ ಸೇರಿದಂತೆ ಸರಣಿ ನೈಸರ್ಗಿಕ ವಿಕೋಪಗಳು ಕೃಷಿ ಉತ್ಪಾದನೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿತ್ತು. ಇದರಿಂದ ಆದಾಯದಲ್ಲಿ ಇಳಿಕೆಯಾಗಿದ್ದರೆ ವೆಚ್ಚದಲ್ಲಿ ಏರಿಕೆಯಾಗಿತ್ತು ಮತ್ತು ಇದು ಆರ್ಥಿಕ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಿತ್ತು.

ತನ್ನ ಬಜೆಟ್ ಭಾಷಣದಲ್ಲಿ ಆರ್ಥಿಕ ಮುಗ್ಗಟ್ಟನ್ನು ಒಪ್ಪಿಕೊಂಡಿದ್ದ ಚವಾಣ, ಬರದಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಇದು ವಿತ್ತೀಯ ಕೊರತೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದರು.

ಸರಕಾರವು ಬಜೆಟ್‌ನಲ್ಲಿ ಕಲ್ಲಿದ್ದಲು ಗಣಿಗಳು,ವಿಮಾ ಕಂಪನಿಗಳು ಮತ್ತು ಭಾರತೀಯ ತಾಮ್ರ ನಿಗಮದ ರಾಷ್ಟ್ರೀಕರಣಕ್ಕಾಗಿ 56 ಕೋಟಿ ರೂ.ಗಳನ್ನು ಮೀಸಲಿರಿಸಿತ್ತು. ಈ ಕ್ರಮವು ಇಂಧನ ಕ್ಷೇತ್ರದ ಬಲವರ್ಧನೆ ಮತ್ತು ಪ್ರಮುಖ ಉದ್ಯಮಗಳ ಮೇಲೆ ಸರಕಾರದ ನಿಯಂತ್ರಣವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿತ್ತು. ಆದಾಗ್ಯೂ,ಭಾರೀ ವಿತ್ತೀಯ ಕೊರತೆಯು ನಂತರದ ವರ್ಷಗಳಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಮತ್ತು ಆರ್ಥಿಕ ಶಿಸ್ತನ್ನು ಜಾರಿಗೊಳಿಸುವುದನ್ನು ಸರಕಾರಕ್ಕೆ ಅನಿವಾರ್ಯವಾಗಿಸಿತ್ತು.

2025-26ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಲು ಮೋದಿ 3.0 ಸರಕಾರವು ಸಿದ್ಧತೆಗಳನ್ನು ನಡೆಸುತ್ತಿದ್ದು, ವಿವಿಧ ಕ್ಷೇತ್ರಗಳು ತೆರಿಗೆ ರಿಯಾಯಿತಿ ಮತ್ತು ಆರ್ಥಿಕ ಉತ್ತೇಜನ ಕ್ರಮಗಳು ಸೇರಿದಂತೆ ತಮ್ಮ ಬೇಡಿಕೆಗಳನ್ನು ಮುಂದಿರಿಸುತ್ತಿವೆ. ಸಾಮಾಜಿಕ ಮಾಧ್ಯಮಗಳು ತೆರಿಗೆ ನೀತಿಗಳಿಗಾಗಿ ಮತ್ತು ಮಧ್ಯಮ ವರ್ಗದ ಮೇಲೆ ಅದರ ಪರಿಣಾಮಗಳಿಗಾಗಿ ವಿತ್ತ ಸಚಿವೆಯನ್ನು ಗುರಿಯಾಗಿಸಿಕೊಂಡಿರುವ ಮೀಮ್‌ಗಳಿಂದ ತುಂಬಿಹೋಗಿವೆ. ಸರಕಾರವು 2023-24ನೇ ಸಾಲಿಗೆ ಶೇ.7.3 ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದ್ದು,ಇದು ಮುಂಬರುವ ಬಜೆಟ್‌ಗಾಗಿ ನಿರೀಕ್ಷೆಗಳಿಗೆ ರೂಪ ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News