ಇಂದೋರ್ ಕಲುಷಿತ ನೀರು ಪ್ರಕರಣ: ಪಾಲಿಕೆ ಆಯುಕ್ತ ವಜಾ, ಹೆಚ್ಚುವರಿ ಆಯುಕ್ತ ಅಮಾನತು
ಇಂದೋರ್: ಕಲುಷಿತ ನೀರು ಸೇವಿಸಿ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಇಂದೋರ್ ಮಹಾನಗರ ಪಾಲಿಕೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಜತೆಗೆ ಹೆಚ್ಚುವರಿ ಆಯುಕ್ತ ರೋಹಿತ್ ಸಿಸೋನಿಯಾ ಅವರನ್ನು ಅಮಾನತುಗೊಳಿಸಿದೆ.
ದೇಶದ ಅತ್ಯಂತ ಸ್ವಚ್ಛನಗರ ಎನಿಸಿಕೊಂಡ ಇಂದೋರ್ ನ ಭಗೀರಥಪುರ ಪ್ರದೇಶದಲ್ಲಿ ಡಿಸೆಂಬರ್ 29ರಂದು ಕಲುಷಿತ ನೀರು ಸೇವಿಸಿ ಹಲವು ಮಂದಿ ಅಸ್ವಸ್ಥಗೊಂಡಿದ್ದರು. 68 ವರ್ಷದ ವೃದ್ಧೆ ಶುಕ್ರವಾರ ಮೃತಪಟ್ಟಿದ್ದು, ಅಧಿಕೃತವಾಗಿ ಸಾವಿನ ಸಂಖ್ಯೆ 10ಕ್ಕೇರಿದೆ.
ಸುಮಾರು 200ಕ್ಕೂ ಹೆಚ್ಚು ಮಂದಿ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 32 ಮಂದಿ ತೀವ್ರ ನಿಗಾ ಘಟಕಗಳಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಇಂದೋರ್ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಅಧೀಕ್ಷಕ ಎಂಜಿನಿಯರ್ ಪ್ರದೀಪ್ ನಿಗಮ್ ಅವರನ್ನು ಕೂಡ ಸೇವಯಿಂದ ವಜಾಗೊಳಿಸಲಾಗಿದೆ. ಇಂದೋರ್ ವಲ್ಲಿ ವಾಸ್ತವ್ಯ ಹೂಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ದುಭೆ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಹೆಚ್ಚುವರಿ ಆಯುಕ್ತರಾಗಿ ಆಕಾಶ್ ಪ್ರಖಾರ್ ಸಿಂಗ್ ಮತ್ತು ಆಶೀಶ್ ಕುಮಾರ್ ಪಾಠಕ್ ಅವರನ್ನು ಐಎಂಸಿಗೆ ನಿಯೋಜಿಸಲಾಗಿದೆ.
"ಒಟ್ಟು 294 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 93 ಮಂದಿ ಬಿಡುಗಡೆಯಾಗಿದ್ದಾರೆ. 201 ಮಂದಿ ಅಸ್ವಸ್ಥರು ಆಸ್ಪತ್ರೆಯಲ್ಲಿದ್ದು, 32 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹೈಕೋರ್ಟ್ ಗೆ ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ ವಿವರಿಸಲಾಗಿದೆ.