ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಮತ ಚಲಾವಣೆಗೆ ಮುನ್ನವೇ 68 ವಾರ್ಡ್ ಗೆದ್ದ ಬಿಜೆಪಿ ಮಿತ್ರಕೂಟ!
ಮುಂಬೈ: ಸುಧೀರ್ಘ ಕಾಲದಿಂದ ಬಾಕಿ ಇರುವ ಮಹಾರಾಷ್ಟ್ರ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಇನ್ನೂ ಒಂದು ಮತ ಕೂಡಾ ಚಲಾವಣೆಯಾಗುವ ಮುನ್ನವೇ ಆಡಳಿತಾರೂಢ ಬಿಜೆಪಿ ಮೈತ್ರಿಕೂಟ 68 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಬಿಜೆಪಿ-ಶಿವಸೇನೆ ಒಟ್ಟು 66 ವಾರ್ಡ್ ಗಳಲ್ಲಿ ಅವಿರೋಧ ಜಯ ಸಾಧಿಸಿದ್ದರೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿ ಪಿಯ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನವಾಗಿತ್ತು. ಹಲವು ವಿರೋಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆದಿದ್ದರಿಂದ 68 ಮುಖಂಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ದ ಕಲ್ಯಾಣ್ ದೊಂಬಿವಿಲಿ ಮಹಾನಗರ ಪಾಲಿಕೆಯಲ್ಲಿ ಗರಿಷ್ಠ ಅಂದರೆ 21 ಮಹಾಯುತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ 15 ಮಂದಿ ಬಿಜೆಪಿ ಮುಖಂಡರು ಹಾಗೂ ಆರು ಮಂದಿ ಶಿವಸೇನೆಗೆ ಸೇರಿದವರು.
ಉಭಯ ಪಕ್ಷಗಳ ಭದ್ರಕೋಟೆ ಎನಿಸಿದ ಉತ್ತರ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ತಲಾ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 12 ಸ್ಥಾನಗಳು ಮಹಾಯುತಿ ಕೂಟಕ್ಕೆ ಲಭ್ಯವಾಗಿವೆ. ಇದೇ ಪ್ರವೃತ್ತಿ ಎಂಎಂಆರ್ ನ ಪನ್ವೇಲ್ ನಲ್ಲೂ ಮುಂದುವರಿದಿದ್ದು, ಏಳು ಮಂದಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶರದ್ ಪವಾರ್ ಅವರ ಎನ್‌ಸಿಪಿ ಭದ್ರಕೋಟೆ ಎನಿಸಿದ ಭಿವಂಡಿ ಪಾಲಿಕೆಯಲ್ಲೂ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಏಕನಾಥ್ ಶಿಂಧೆ ಅವರ ಸ್ವಕ್ಷೇತ್ರ ಥಾಣೆಯಲ್ಲಿ ಮೇಲ್ನೋಟಕ್ಕೆ ಬಿಜೆಪಿ ಹಾಗೂ ಶಿವಸೇನೆ ನಡುವೆ ಜಗಳ ಕಂಡುಬಂದಿದ್ದರೂ, ಶಿವಸೇನೆಯ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್, ಜಿಲ್ಲೆಯಲ್ಲಿ ಪ್ರತಿಭಟನೆಯನ್ನೂ ನಡೆಸಿದೆ.