ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್: ನೂತನ Pew ಅಧ್ಯಯನ ವರದಿ
PC : X \ @iqrytweets
ಹೊಸದಿಲ್ಲಿ: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್ ಆಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಜಾಗತಿಕ ಮುಸ್ಲಿಮ್ ಜನಸಂಖ್ಯೆಯಲ್ಲಿ 34.7 ಕೋ.ಯಷ್ಟು ಏರಿಕೆಯಾಗಿದೆ,ಇದೇ ವೇಳೆ ಹಿಂದುಗಳು ವಿಶ್ವದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದ್ದು ಜಾಗತಿಕ ಜನಸಂಖ್ಯೆಯ ಶೇ.14.9ರಷ್ಟಿದ್ದಾರೆ ಎಂದು ಪ್ಯೂ ರೀಸರ್ಚ್ ಸೆಂಟರ್ ತನ್ನ ನೂತನ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಜೂ.9ರಂದು ಬಿಡುಗಡೆಗೊಂಡಿರುವ ಅಧ್ಯಯನ ವರದಿಯು 2010 ಮತ್ತು 2020ರ ನಡುವೆ ಜಾಗತಿಕ ಧಾರ್ಮಿಕ ಜನಸಂಖ್ಯೆಯಲ್ಲಿನ ಏರಿಕೆಯನ್ನು ಗಣನೆಗೆ ತೆಗೆದುಕೊಂಡಿದೆ. ಜನಸಂಖ್ಯಾ ಬೆಳವಣಿಗೆಯು ಹೇಗೆ ಜಾಗತಿಕ ಧಾರ್ಮಿಕ ಸ್ಥಿತಿಗತಿಯ ಮೇಲೆ ಪ್ರಭಾವ ಬೀರಿದೆ ಎನ್ನುವುದರ ಮೇಲೆ ಅಧ್ಯಯನವು ಬೆಳಕು ಚೆಲ್ಲಿದೆ. ಈ ವರ್ಷದ ಆವೃತ್ತಿಯು 2010ರಲ್ಲಿ ಆರಂಭಗೊಂಡ ಧಾರ್ಮಿಕ ಗುಂಪುಗಳ ಕುರಿತು ದ್ವಿತೀಯ ವರದಿಯಾಗಿದೆ.
ಕಳೆದ ದಶಕದಲ್ಲಿ ಮುಸ್ಲಿಮರ ಜಾಗತಿಕ ಜನಸಂಖ್ಯೆಯಲ್ಲಿ 34.7 ಕೋ.ಯಷ್ಟು ಏರಿಕೆಯಾಗಿದ್ದು, ಇದು ಇತರ ಎಲ್ಲ ಧರ್ಮಗಳಲ್ಲಿಯ ಒಟ್ಟು ಏರಿಕೆಗಿಂತ ಅಧಿಕವಾಗಿದೆ.
ಮುಸ್ಲಿಮ್ ಸಮುದಾಯದಲ್ಲಿ ಮರಣಗಳಿಗಿಂತ ಜನನಗಳ ಸಂಖ್ಯೆ ಹೆಚ್ಚಿದೆ ಎಂದು ಪ್ಯೂ ರೀಸರ್ಚ್ ಸೆಂಟರ್‌ನ ಹಿರಿಯ ಜನಸಂಖ್ಯಾ ಶಾಸ್ತ್ರಜ್ಞ ಕಾನ್ರಾಡ್ ಹ್ಯಾಕೆಟ್ ಹೇಳಿದ್ದಾರೆ.
ಮುಸ್ಲಿಮರು ಮುಖ್ಯವಾಗಿ ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶದಂತಹ ಹೆಚ್ಚಿನ ಜನಸಂಖ್ಯಾ ಬೆಳವಣಿಗೆಯನ್ನು ನೋಡುತ್ತಿರುವ ಪ್ರದೇಶಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. ಈ ಪ್ರದೇಶದ ಜನಸಂಖ್ಯೆಯಲ್ಲಿ ಅವರ ಪಾಲು ಶೇ.94.2ರಷ್ಟಿದ್ದು, ಉಪ-ಸಹಾರನ್ ಆಫ್ರಿಕಾದಲ್ಲಿ ಅವರ ಜನಸಂಖ್ಯೆ ಶೇ.33ರಷ್ಟಿದೆ. ಏಶ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು,2020 ಮತ್ತು 2020ರ ನಡುವೆ ಅಲ್ಲಿ ಶೇ.16.2ರಷ್ಟು ಏರಿಕೆಯಾಗಿದೆ.
ಈ ಅವಧಿಯಲ್ಲಿ ಜಾಗತಿಕವಾಗಿ ಕ್ರೈಸ್ತರ ಸಂಖ್ಯೆಯಲ್ಲಿ 12.20 ಕೋ.ಯಷ್ಟು ಏರಿಕೆಯಾಗಿದೆಯಾದರೂ ಒಟ್ಟಾರೆ ಜಾಗತಿಕ ಜನಸಂಖ್ಯೆಯಲ್ಲಿ ಅದರ ಪಾಲು ಕಡಿಮೆಯಾಗಿದೆ ಎಂದು ಅಧ್ಯಯನವು ತೋರಿಸಿದೆ. ಈ ಕುಸಿತದ ಹೊರತಾಗಿಯೂ ಕ್ರೈಸ್ತ ಧರ್ಮವು ಈಗಲೂ ವಿಶ್ವದ ಅತ್ಯಂತ ದೊಡ್ಡ ಧರ್ಮವಾಗಿ ಉಳಿದಿದ್ದು,2.3 ಶತಕೋಟಿ ಅಂದರೆ ಜಾಗತಿಕ ಜನಸಂಖ್ಯೆಯ ಶೇ.29ರಷ್ಟು ಜನರು ಅದನ್ನು ಅನುಸರಿಸುತ್ತಿದ್ದಾರೆ.
ಕ್ರೈಸ್ತ ಧರ್ಮವು ಪ್ರಮುಖವಾಗಿ ಇತರ ಧರ್ಮಗಳ ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಶೇ.1.8ರಷ್ಟು ಇಳಿಕೆಯನ್ನು ದಾಖಲಿಸಿದೆ. ಯುರೋಪ್,ಉತ್ತರ ಅಮೆರಿಕ,ದಕ್ಷಿಣ ಅಮೆರಿಕ,ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‌ಗಳಲ್ಲಿ ಈ ಇಳಿಕೆ ಕಂಡು ಬಂದಿದೆ.
ಕ್ರೈಸ್ತ ಧರ್ಮವು ಏಶ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶಗಳನ್ನು ಹೊರತುಪಡಿಸಿ ಜಗತ್ತಿನ ಪ್ರಮುಖ ಧರ್ಮವಾಗಿ ಉಳಿದಿದೆ.
ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳ ಬಳಿಕ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಂಡಿರದವರು ವಿಶ್ವದ ಮೂರನೇ ಅತಿ ದೊಡ್ಡ ಜನಸಂಖ್ಯೆಯ ಗುಂಪಾಗಿದ್ದಾರೆ. ವಿಶ್ವದ ಜನಸಂಖ್ಯೆಯ ಶೇ.24.2ರಷ್ಟು ಜನರು ಯಾವುದೇ ಧರ್ಮವನ್ನು ಅನುಸರಿಸುತ್ತಿಲ್ಲ ಎನ್ನುವುದನ್ನು ಅಧ್ಯಯನವು ತೋರಿಸಿದೆ.
ಧರ್ಮವನ್ನು ತೊರೆದಿರುವ ಜನರು ಜಾಗತಿಕ ಕ್ರೈಸ್ತ ಜನಸಂಖ್ಯೆ ಮೇಲೆ ತೀವ್ರ ಪರಿಣಾಮವನ್ನು ಬೀರಿದ್ದಾರೆ.
ಬೌದ್ಧರು ಪೂರ್ವ ಏಶ್ಯಾದಲ್ಲಿ ಜನರು ಧರ್ಮದಿಂದ ದೂರ ಸರಿಯುತ್ತಿರುವುದರಿಂದ ಪ್ರಭಾವಿತರಾಗಿರುವ ಇನ್ನೊಂದು ಗುಂಪು ಆಗಿದ್ದಾರೆ. 2010 ಮತ್ತು 2020ರ ನಡುವೆ ಬೌದ್ಧಧರ್ಮವನ್ನು ಸೇರಿದವರಿಗಿಂತ ಹೆಚ್ಚಿನ ಜನರು ಅದನ್ನು ತೊರೆದಿದ್ದಾರೆ. 2010ಕ್ಕೆ ಹೋಲಿಸಿದರೆ 2020ರಲ್ಲಿ ಈ ಪ್ರದೇಶದಲ್ಲಿ ಕಡಿಮೆ ಅನುಯಾಯಿಗಳನ್ನು ಹೊಂದಿರುವ ಏಕೈಕ ಧರ್ಮವಿದು. ಈ ಅವಧಿಯಲ್ಲಿ 1.90 ಕೋ.ಜನರು ಬೌದ್ಧಧರ್ಮವನ್ನು ತೊರೆದಿದ್ದಾರೆ. ಆದಾಗ್ಯೂ ಈ ಸಂಖ್ಯೆಗಳು ಪೂರ್ಣ ಚಿತ್ರಣವನ್ನು ತೋರಿಸದಿರಬಹುದು,ಏಕೆಂದರೆ ಬೌದ್ಧ ಸಂಪ್ರದಾಯಗಳು ಅಥವಾ ಆಚರಣೆಗಳನ್ನು ಅನುಸರಿಸುತ್ತಿರುವ ಅನೇಕ ಜನರು ಅಧಿಕೃತವಾಗಿ ಬೌದ್ಧರು ಎಂದು ಅಧಿಕೃತವಾಗಿ ಗುರುತಿಸಿಕೊಂಡಿರದ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯು ಹೇಳಿದೆ.
ಹಿಂದು ವಿಶ್ವದ ನಾಲ್ಕನೇ ಅತಿ ದೊಡ್ಡ ಧರ್ಮವಾಗಿದ್ದು,ಅಧಿಕ ಸಂಖ್ಯೆ(ಶೇ.95)ಯ ಹಿಂದುಗಳು ಭಾರತದಲ್ಲಿ ವಾಸವಾಗಿದ್ದಾರೆ. 2010 ಮತ್ತು 2020ರ ನಡುವಿನ ಅವಧಿಯಲ್ಲಿ ಮುಖ್ಯವಾಗಿ ವಲಸೆಯಿಂದಾಗಿ ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶದಲ್ಲಿ ಅವರ ಸಂಖ್ಯೆಯಲ್ಲಿ ಶೇ.62ರಷ್ಟು ಹೆಚ್ಚಳವಾಗಿದೆ. ಉತ್ತರ ಅಮೆರಿಕದಲ್ಲಿ ಹಿಂದುಗಳ ಸಂಖ್ಯೆಯಲ್ಲಿ ಶೇ.55ರಷ್ಟು ಏರಿಕೆಯಾಗಿದೆ.
ಈ ಅವಧಿಯಲ್ಲಿ ಯಹೂದಿಗಳ ಜನಸಂಖ್ಯೆಯಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು,1.4ಕೋ.ಯಿಂದ 1.5 ಕೋ.ಗೆ ಹೆಚ್ಚಿದೆ. ಜಾಗತಿಕ ಜನಸಂಖ್ಯೆಯಲ್ಲಿ ಯಹೂದಿಗಳ ಪಾಲು ಶೆ.0.2ರಷ್ಟಿದ್ದು, ಶೇ.45.9ರಷ್ಟು ಯಹೂದಿಗಳು ಇಸ್ರೇಲ್‌ನಲ್ಲಿ ವಾಸವಾಗಿದ್ದಾರೆ. ಇದು ಅವರು ವಾಸವಿರುವ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಶೇಕಡಾವಾರು ಪ್ರಮಾಣವಾಗಿದೆ.