ಗುಹೆಯಲ್ಲಿ ಪತ್ತೆಯಾದ ಮಹಿಳೆಯೊಂದಿಗಿದ್ದ ಮಕ್ಕಳ ತಂದೆ ಇಸ್ರೇಲ್ ಉದ್ಯಮಿ : ಅಧಿಕಾರಿಗಳಿಂದ ಮಾಹಿತಿ
Photo | indianexpress
ಹೊಸದಿಲ್ಲಿ : ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕರ್ನಾಟಕದ ಗುಹೆಯೊಂದರಲ್ಲಿ ಪತ್ತೆಯಾದ ರಷ್ಯಾದ ಮಹಿಳೆ ಗೋವಾದ ಗುಹೆಯಲ್ಲಿದ್ದಾಗ ಒಂದು ಮಗುವಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಮಧ್ಯೆ ಮಕ್ಕಳ ತಂದೆ ಎಂದು ಮಹಿಳೆ ಹೇಳಿದ ಇಸ್ರೇಲ್ ಉದ್ಯಮಿಯನ್ನು ಸಂಪರ್ಕಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಜುಲೈ 9ರಂದು ಗುಹೆಯಲ್ಲಿ ನೀನಾ ಕುಟಿನಾ(40) ಮತ್ತು ಆರು ಮತ್ತು ನಾಲ್ಕು ವರ್ಷದ ಆಕೆಯ ಇಬ್ಬರು ಹೆಣ್ಣುಮಕ್ಕಳು ಪತ್ತೆಯಾಗಿದ್ದರು. ಅವರ ವೀಸಾ ಅವಧಿ 2017ರಲ್ಲಿ ಮುಗಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ್ದ ನೀನಾ, ನಾನು ಬಹಳ ಹಿಂದೆಯೇ ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಧ್ಯಾನಕ್ಕಾಗಿ ಗೋಕರ್ಣಕ್ಕೆ ಬಂದಿಲ್ಲ ಎಂದು ಹೇಳಿದರು.
ಎಫ್ಆರ್‌ಆರ್‌ಒ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿ, ಮಕ್ಕಳ ತಂದೆ ಇಸ್ರೇಲ್ ಪ್ರಜೆಯಾಗಿದ್ದು, ಅವರು ವ್ಯಾಪಾರ ವೀಸಾದಲ್ಲಿ ಭಾರತದಲ್ಲಿರುವುದನ್ನು ಪತ್ತೆಹಚ್ಚಿದ್ದೇವೆ. ನೀನಾ ಮತ್ತು ಮಕ್ಕಳಿಗೆ ಟಿಕೆಟ್ ವ್ಯವಸ್ಥೆ ಬಗ್ಗೆ ಮಕ್ಕಳ ತಂದೆ ಎಂದು ಹೇಳಲಾದ ಇಸ್ರೇಲ್ ವ್ಯಕ್ತಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ನೀನಾ ಮಕ್ಕಳ ತಂದೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆಕೆಗೆ ಕೌನ್ಸಿಲಿಂಗ್ ನಡೆಸಿದ ಬಳಿಕ ಇಸ್ರೇಲ್ ಪ್ರಜೆಯ ಬಗ್ಗೆ ವಿವರಗಳನ್ನು ನೀಡಿದ್ದಾಳೆ ಎಂದು ಮೂಲಗಳು ತಿಳಿಸಿದೆ.
ಎಫ್ಆರ್‌ಆರ್‌ಒ ಅಧಿಕಾರಿಗಳು ರಷ್ಯಾದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮಹಿಳೆ ಮತ್ತು ಮಕ್ಕಳನ್ನು ರಷ್ಯಾಕ್ಕೆ ಕಳುಹಿಸಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಆಕೆಗೆ ರಷ್ಯಾದಲ್ಲಿ ಮತ್ತೊಂದು ಮಗುವಿದೆ. ನಾವು ಚೆನ್ನೈನಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ʼನಾನು ಮಕ್ಕಳೊಂದಿಗೆ ಕಾಡಿನಲ್ಲಿ ಸಂತೋಷವಾಗಿದ್ದೆ, ನನ್ನ ಮಕ್ಕಳು ಮೊದಲ ಬಾರಿಗೆ ಆಸ್ಪತ್ರೆ ಮತ್ತು ವೈದ್ಯರನ್ನು ನೋಡಿದರು. ನಮಗೆ ಕಾಡಿನಲ್ಲಿ ವಾಸ ಮಾಡಿ ಅನುಭವವಿದೆ. ನಾವು ಸಾಯುತ್ತಿರಲಿಲ್ಲ. ಅವರು ಕಾಡಿನಲ್ಲಿ ತುಂಬಾ ಸಂತೋಷದಲ್ಲಿದ್ದರು. ಅವರು ಜಲಪಾತದಲ್ಲಿ ಈಜುತ್ತಿದ್ದರು. ಮಲಗಲು ತುಂಬಾ ಒಳ್ಳೆಯ ಸ್ಥಳವಿತ್ತು. ಜೇಡಿಮಣ್ಣು ಮತ್ತು ಚಿತ್ರಕಲೆ ಬಳಸಿ ಕಲಾಕೃತಿ ರಚಿಸುವ ಬಗ್ಗೆ ಬಹಳಷ್ಟು ಪಾಠಗಳನ್ನು ಕಲಿತರು. ನಾವು ರುಚಿಕರವಾದ ಆಹಾರವನ್ನು ಬೇಯಿಸಿ ತಿನ್ನುತ್ತಿದ್ದೆವು. ನಾನು ಕನಿಷ್ಠ 20 ದೇಶಗಳಿಗೆ ಪ್ರಯಾಣಿಸಿದ್ದೇನೆ. ವಿವಿಧ ಕಾಡುಗಳಲ್ಲಿ ವಾಸಿಸಿದ್ದೇನೆ. ಏಕೆಂದರೆ ನಾವು ಪ್ರಕೃತಿಯನ್ನು ಪ್ರೀತಿಸುತ್ತೇವೆ. ಆ ಗುಹೆ ದಟ್ಟವಾದ ಕಾಡಿನೊಳಗೆ ಇರಲಿಲ್ಲ ಮತ್ತು ಅದು ಚಿಕ್ಕದಾಗಿರಲಿಲ್ಲʼ ಎಂದು ಹೇಳಿದ್ದಾರೆ.