2020ರ ಪ್ರತಿಭಟನೆಯ ವೇಳೆ ರೈತ ಮಹಿಳೆಯನ್ನು ಹಿಯಾಳಿಸಿ ಟ್ವೀಟ್ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್
100ನ ರೂ.ಗೆ ಪ್ರತಿಭಟನೆಗೆ ಲಭ್ಯ ಎಂದು ಟ್ವೀಟ್ ಮಾಡಿದ್ದ ಕಂಗನಾ
ಭಟಿಂಡಾ, ಅ.27: 2020ರ ರೈತರ ಪ್ರತಿಭಟನೆಯ ವೇಳೆ ವಿವಾದಾತ್ಮಕ ಟ್ವೀಟ್ ಮೂಲಕ ಮಹಿಳಾ ರೈತರೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಭಟಿಂಡಾ ನ್ಯಾಯಾಲಯದ ಮುಂದೆ ಸೋಮವಾರ ವಿಷಾದ ವ್ಯಕ್ತಪಡಿಸಿದರು.
2020ರಲ್ಲಿ ಕಂಗನಾ ಅವರು ವಯಸ್ಸಾದ ರೈತ ಮಹಿಳೆ ಮಹಿಂದರ್ ಕೌರ್ ಅವರನ್ನು ದಿಲ್ಲಿಯ ಶಾಹೀನ್ ಬಾಗ್ ಸಿಎಎ ವಿರೋಧಿ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ಬಾನೋ ಎಂದು ತಪ್ಪಾಗಿ ಗುರುತಿಸಿ, “ಪ್ರತಿಭಟನೆಗಳಿಗೆ 100 ರೂಪಾಯಿಗೆ ಲಭ್ಯ” ಎಂದು ವ್ಯಂಗ್ಯವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಈಗ ಆ ಟ್ವೀಟ್ ಡಿಲೀಟ್ ಮಾಡಲಾಗಿದೆ.
ನ್ಯಾಯಾಲಯದ ವಿಚಾರಣೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂಗನಾ, “ಅದು ನಾನು ಬರೆದ ಪೋಸ್ಟ್ ಅಲ್ಲ, ಅದು ಕೇವಲ ಒಂದು ಸಾಮಾನ್ಯ ಮೀಮ್ ನ ಮರುಟ್ವೀಟ್. ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದ ಸಮಯದಲ್ಲಿ ಯಾರೋ ಮಾಡಿದ ಮೀಮ್ ಅನ್ನು ಹಂಚಿಕೊಂಡಿದ್ದೆ” ಎಂದು ಹೇಳಿದರು.
“ನಾನು ಮಾತಾಜಿ (ಮಹಿಂದರ್ ಕೌರ್) ಅವರ ಪತಿಗೆ ಈ ಬಗ್ಗೆ ಸಂದೇಶ ಕಳುಹಿಸಿದ್ದೇನೆ. ಯಾರಿಗಾದರೂ ನನ್ನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ. ಈ ವಿವಾದ ನನ್ನ ಕನಸಿನಲ್ಲಿಯೂ ಊಹಿಸದಂಥದ್ದಾಗಿದೆ,” ಎಂದು ಕಂಗನಾ ಹೇಳಿದರು.
ಮಂಡಿ ಸಂಸದೆ ಕಂಗನಾ ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಮತ್ತು ಬಾಂಡ್ ನೀಡಲು ಹಾಜರಾದರು. ಅವರ ವಕೀಲರು, “ನ್ಯಾಯಾಲಯದ ಒಳಗೆ ಕಂಗನಾ ಅವರು ಕ್ಷಮೆಯಾಚಿಸುವ ಮನಸ್ಸು ವ್ಯಕ್ತಪಡಿಸಿದರು. ಆದರೆ ಮಹಿಂದರ್ ಕೌರ್ ಅಸ್ವಸ್ಥರಾಗಿದ್ದರಿಂದ ಅವರ ಪತಿ ನ್ಯಾಯಾಲಯಕ್ಕೆ ಹಾಜರಾಗಿದ್ದರು,” ಎಂದು ವಿವರಿಸಿದರು.
ನ್ಯಾಯಾಲಯದಲ್ಲಿ ದೂರುದಾರರಲ್ಲಿ ಕ್ಷಮೆಯಾಚಿಸಲು ಬಯಸಿದ್ದೇನೆ ಎಂದು ಅವರು ಹೇಳಿದರು. ಇದು ಅವರ ಬಗ್ಗೆ ಮಾತ್ರವಲ್ಲ, ಪ್ರತಿಭಟನೆ ನಡೆಸುತ್ತಿದ್ದ ರೈತರ ಬಗ್ಗೆಯೂ ಆಗಿತ್ತು; ಹೇಳಿಕೆ ನೀಡಿದ್ದ ಸಂದರ್ಭ ಹಲವರು ಪ್ರತಿಭಟನೆ ನಡೆಸುತ್ತಿದ್ದರು. ಆದ್ದರಿಂದ, ನ್ಯಾಯಾಲಯವು ಮಹಿಂದರ್ ಕೌರ್ ಅವರ ಪತಿಯನ್ನು ಕೇಳಿದಾಗ, ಅವರು ಈ ಬಗ್ಗೆ ಈಗ ನಿರ್ಧರಿಸಲು ಸಾಧ್ಯವಿಲ್ಲ. ಕಿಸಾನ್ ಸಂಘಗಳು ಮತ್ತು ಇತರರೊಂದಿಗೆ ಈ ವಿಷಯವನ್ನು ಚರ್ಚಿಸುವುದಾಗಿ ಅವರು ಹೇಳಿದರು ಎಂದು ವಕೀಲರು ತಿಳಿಸಿದರು.
ಈ ಪ್ರಕರಣದ ಸಂಬಂಧ, ಈ ವರ್ಷ ಮೊದಲು ಸುಪ್ರೀಂ ಕೋರ್ಟ್ ಕಂಗನಾ ಅವರ ಮನವಿಯನ್ನು ತಿರಸ್ಕರಿಸಿತ್ತು. “ಇದು ಸರಳ ಮರುಟ್ವೀಟ್ ಅಲ್ಲ; ನೀವು ಮಸಾಲೆ ಸೇರಿಸಿದ್ದೀರಿ,” ಎಂದು ನ್ಯಾಯಾಲಯ ಹೇಳಿತ್ತು. ಮಹಿಂದರ್ ಕೌರ್ ಅವರ ವಕೀಲರು ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ನವೆಂಬರ್ 24ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಮಂಜೀತ್ ರಾಯ್ ಅವರು, “ನ್ಯಾಯಾಲಯದ ಮುಂದೆ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ಕಂಗನಾ ಅವರು ಮಹಿಂದರ್ ಕೌರ್ ಅವರ ಮನೆಗೆ ತೆರಳಿ, ಅವರ ಪಾದಗಳನ್ನು ಹಿಡಿದು ಖುದ್ದಾಗಿ ಕ್ಷಮೆಯಾಚಿಸಬೇಕು,” ಎಂದು ಆಗ್ರಹಿಸಿದ್ದಾರೆ.