×
Ad

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ‘ಜೈ ಭೀಮ್’, ‘ಸರ್ಪಟ್ಟ’, ಕರ್ಣನ್ ಚಿತ್ರಗಳ ಕಡೆಗಣನೆ; ತೀರ್ಪುಗಾರರ ವಿರುದ್ಧ ಅಸಮಾಧಾನ ಹೊರಹಾಕಿದ ಸಿನಿಪ್ರಿಯರು

Update: 2023-08-25 21:08 IST

ಜೈ ಭೀಮ್, ಸರ್ಪಟ್ಟ, ಕರ್ಣನ್

ಹೊಸದಿಲ್ಲಿ: ಗುರುವಾರ, ಆಗಸ್ಟ್ 25ರಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ಪ್ರಶಸ್ತಿಗೆ ಭಾಜನವಾಗಿರುವ ಚಲನಚಿತ್ರಗಳ ಪೈಕಿ ‘ಕಡೈಸಿ ವಿವಸಾಯಿ’ ‘ಕಾಶ‍್ಮೀರ್ ಫೈಲ್ಸ್’, ‘ಆರ್ಆರ್ಆರ್’ “ರಾಕೆಟರಿ: ದಿ ನಂಬಿ ಎಫೆಕ್ಟ್’ ಚಿತ್ರಗಳು ಸೇರಿವೆ. ಹೀಗಿದ್ದೂ, ಸಾಮಾಜಿಕ ಸಂದೇಶಗಳನ್ನು ಹೊಂದಿದ್ದರಿಂದ ಹಾಗೂ ಜಾತಿ ಪದ್ಧತಿ ಕುರಿತು ಚಿತ್ರಿತವಾಗಿದ್ದುದರಿಂದ ‘ಸರ್ಪಟ್ಟ ಪರಂಬರೈ’, ‘ಕರ್ಣನ್’ ಹಾಗೂ ‘ಜೈ ಭೀಮ್’ನಂಥ ಚಲನಚಿತ್ರಗಳನ್ನು ಕಡೆಗಣಿಸಲಾಗಿದೆ ಎಂದು ಹಲವಾರು ಸಿನಿಪ್ರಿಯರು ತೀರ್ಪುಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಸಿನಿಪ್ರಿಯರು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಸ್ತಿ ವಿಜೇತ ಚಲನಚಿತ್ರಗಳ ಬಗ್ಗೆ ಹಾಗೂ ಮೇಲೆ ಉಲ್ಲೇಖಿಸಲಾಗಿರುವ ಚಲನಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಟ್ಟಿಯಿಂದ ‘ಜೈ ಭೀಮ್’ ಚಿತ್ರ ಬಿಟ್ಟು ಹೋಗಿರುವುದಕ್ಕೆ ಖ್ಯಾತ ಛಾಯಾಗ್ರಾಹಕ ಪಿ.ಸಿ.ಶ‍್ರೀರಾಮ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. “ನಾವು ಚಲನಚಿತ್ರ ಕುಟುಂಬದವರೆಲ್ಲ ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯ ಖುಷಿಯಲ್ಲಿ ಒಗ್ಗಟ್ಟಾಗಿದ್ದೇವೆ. ಆದರೆ, ನೀವು ಯಾವುದಾದರೂ ನಿರ್ದಿಷ್ಟ ಕಾರಣಕ್ಕಾಗಿ ‘ಜೈ ಭೀಮ್’ ಚಿತ್ರವನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟಿದ್ದೀರೊ ಅಥವಾ ಅವರಿಗೆ ಭಾರತದ ಧ್ವನಿಯು ನಡುಕ ಹುಟ್ಟಿಸಿರುವುದರಿಂದ ಕೈಬಿಡಲಾಗಿದೆಯೊ?” ಎಂದು ಪ್ರಶ್ನಿಸಿದ್ದಾರೆ.

ತೆಲುಗು ಚಿತ್ರನಟ ನಾನಿ ಕೂಡಾ ‘ಜೈ ಭೀಮ್’ ಚಿತ್ರವನ್ನು ಪ್ರಶಸ್ತಿ ಆಯ್ಕೆಯಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಾರಿಯ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ನರ್ಗಿಸ್ ದತ್ ಭಾವೈಕ್ಯತಾ ಪ್ರಶಸ್ತಿ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾ. ರಂಜಿತ್ ನಿರ್ದೇಶಿಸಿದ್ದ ‘ಸರ್ಪಟ್ಟ ಪರಂಬರೈ’ ಚಿತ್ರವು ದಲಿತ ಬಾಕ್ಸರ್ ಒಬ್ಬ ಜಾತಿ ವ್ಯವಸ್ಥೆಯನ್ನು ಮೀರಿ ಹೇಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಯಶಸ್ವಿಯಾಗುತ್ತಾನೆ ಎಂಬುದನ್ನು ಚಿತ್ರಿಸಿತ್ತು. ಮಾರಿ ಸೆಲ್ವರಾಜ್ ನಿರ್ದೇಶಿಸಿದ್ದ ‘ಕರ್ಣನ್’ ಚಿತ್ರವು ಬಲಾಢ್ಯ ಜಾತಿಗಳು ಕೆಳ ಜಾತಿಗಳ ವಿರುದ್ಧ ಹೇಗೆ ಹಿಂಸಾಚಾರ ನಡೆಸುತ್ತವೆ ಎಂಬುದನ್ನು ತೋರಿಸಿತ್ತು. ಹಾಗೆಯೇ ಟಿ.ಜೆ.ಜ್ಞಾನವೇಲ್ ನಿರ್ದೇಶಿಸಿದ್ದ ‘ಜೈ ಭೀಮ್’ ಚಿತ್ರವು ಇರುಳರ್ ಸಮುದಾಯದ ರಾಜಕಣ್ಣು ಎಂಬ ವ್ಯಕ್ತಿ ಪೊಲೀಸರ ಹಿಂಸಾಚಾರಕ್ಕೆ ಹೇಗೆ ಬಲಿಯಾಗುತ್ತಾನೆ, ಆ ಪೊಲೀಸ್ ದೌರ್ಜನ್ಯದ ವಿರುದ್ಧ ಆತನ ಪತ್ನಿಯಾದ ಸೆಂಗೆಣಿ ಹೇಗೆ ಹೋರಾಡಿ ನ್ಯಾಯ ಪಡೆಯುತ್ತಾಳೆ ಎಂಬುದರ ಸುತ್ತ ಚಿತ್ರಿತವಾಗಿತ್ತು. ಈ ಮೂರೂ ಚಿತ್ರಗಳು ಸಾಮಾಜಿಕ ಸಂದೇಶಗಳೊಂದಿಗೆ ಜಾತಿ ವ್ಯವಸ್ಥೆಯ ಕರಾಳತೆ ವಿರುದ್ಧ ಧ್ವನಿ ಎತ್ತಿದ್ದವು. ಇಂತಹ ಸಾಮಾಜಿಕ ಕಾಳಜಿ ಹೊಂದಿದ್ದ ಈ ಮೂರು ಚಿತ್ರಗಳನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಯಾವ ವಿಭಾಗಗಳಿಗೂ ಪರಿಗಣಿಸದಿರುವುದರ ವಿರುದ್ಧ ಚಿತ್ರಪ್ರೇಮಿಗಳಿಂದ ತೀವ್ರ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News