×
Ad

ಸುಪ್ರೀಂ ಕೋರ್ಟ್ ನಲ್ಲಿ ವಕೀಲರ ಅಭಿನಂದನೆಗೆ ʼಜೈ ಭೀಮ್ʼಎಂದು ಪ್ರತಿಕ್ರಿಯಿಸಿದ ನೂತನ ಸಿಜೆಐ ಬಿ. ಆರ್. ಗವಾಯಿ

Update: 2025-05-14 15:54 IST

Photo : barandbench.com

ಹೊಸದಿಲ್ಲಿ: ಐತಿಹಾಸಿಕ ಕ್ಷಣವೊಂದರಲ್ಲಿ ನೂತನವಾಗಿ ನೇಮಕಗೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರು ಸ್ವಾಗತಿಸುತ್ತಿದ್ದಂತೆ ʼಜೈ ಭೀಮ್ʼ ಎಂದು ಪ್ರತಿಕ್ರಿಯಿಸಿದರು.

ಪರಿಶಿಷ್ಟ ಜಾತಿ ಹಿನ್ನೆಲೆಯ 2ನೇ ಸಿಜೆಐ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಿ.ಆರ್. ಗವಾಯಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ದಲಿತ ಹಕ್ಕುಗಳ ಚಳವಳಿಯ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ನಮನವನ್ನು ಸಲ್ಲಿಸಿದಾಗ ವಕೀಲರಲ್ಲಿ ಸಂಚಲನ ಮೂಡಿತು ಎಂದು barandbench.com ವರದಿ ಮಾಡಿದೆ.

ನ್ಯಾಯಮೂರ್ತಿ ಗವಾಯಿ ಅವರು ನವೆಂಬರ್ 23, 2025 ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಬುಲ್ಡೋಜರ್ ನ್ಯಾಯವನ್ನು ಖಂಡಿಸಿದ, ಅಂತಹ ಪದ್ಧತಿಗಳನ್ನು ನಿಗ್ರಹಿಸಲು ಕಠಿಣ ನಿಯಮಗಳನ್ನು ರೂಪಿಸುವುದು ಸೇರಿದಂತೆ ನಿರ್ಣಾಯಕ ಆದೇಶಗಳನ್ನು ಹೊರಡಿಸಿದ ಹಲವಾರು ಪ್ರಮುಖ ಪೀಠಗಳ ಭಾಗವಾಗಿ ನ್ಯಾಯಮೂರ್ತಿ ಗವಾಯಿ ಅವರು ಕಾರ್ಯನಿರ್ವಹಿಸಿದ್ದಾರೆ.

ಕೇಂದ್ರ ಸರಕಾರದಿಂದ 370 ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಎತ್ತಿಹಿಡಿದ ಪೀಠದಲ್ಲಿಯೂ ಗವಾಯಿ ಇದ್ದರು. ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದು ಸೇರಿದಂತೆ ಮಹತ್ವದ ತೀರ್ಪುಗಳನ್ನು ನೀಡಿದ ಸಂವಿಧಾನ ಪೀಠದ ಭಾಗವಾಗಿ ಅವರು ಕೆಲಸ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠವು ಆಪ್ ನಾಯಕ ಮನೀಷ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿತು. ಈ ತೀರ್ಪು ಅದೇ ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ನೀಡಲು ಆಧಾರವಾಯಿತು. ಮೋದಿ ಉಪನಾಮದ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಯನ್ನು ತಡೆಹಿಡಿದ ಪೀಠದ ನೇತೃತ್ವ ವಹಿಸಿದ್ದ ಅವರು, 2002 ರ ಗೋಧ್ರಾ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಅತುಲ್ ಸೆಟಲ್ವಾಡ್ ಅವರಿಗೆ ಜಾಮೀನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News