ಜೈಪುರ: ಆಸ್ಪತ್ರೆಗೆ ತೆರಳಬೇಕಿದ್ದ ಕೈದಿಗಳಿಂದ ನಗರದಲ್ಲಿ ಮೋಜು ಮಸ್ತಿ!
PC : NDTV
ಜೈಪುರ: ಜೈಪುರ ಕೇಂದ್ರ ಕಾರಾಗೃದಲ್ಲಿನ ಐವರು ಕೈದಿಗಳು ಶನಿವಾರ ಮಾಮೂಲು ವೈದ್ಯಕೀಯ ತಪಾಸಣೆಗಾಗಿ ಪೋಲಿಸರ ಬೆಂಗಾವಲಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಆದರೆ ಅದು ಪೋಹಾ ಉಪಹಾರ,ಹೋಟೆಲ್ ವಾಸ್ತವ್ಯ ಮತ್ತು ಪತ್ನಿ ಮತ್ತು ಗರ್ಲ್‌ಫ್ರೆಂಡ್‌ಗಳೊಂದಿಗೆ ಕೈದಿಗಳ ನಗರ ಪ್ರವಾಸವಾಗಿ ಬದಲಾಗಿತ್ತು. ಇದು ಅಧಿಕಾರಿಗಳಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ ಎಂದು ವರದಿಯಾಗಿದೆ.
ಜೈಲಿನಿಂದ ಹೊರಗೆ ಕೆಲವು ಗಂಟೆಗಳ ಸ್ವಾತಂತ್ರ್ಯವನ್ನು ಆನಂದಿಸಲು ಈ ಕೈದಿಗಳು ಲಂಚವನ್ನು ನೀಡಿದ್ದರು ಎನ್ನುವುದು ಬಹಿರಂಗಗೊಂಡ ಬಳಿಕ ರವಿವಾರ ಐವರು ಕಾನ್‌ಸ್ಟೇಬಲ್‌ಗಳು, ನಾಲ್ವರು ಕೈದಿಗಳು ಮತ್ತು ಅವರ ನಾಲ್ವರು ಸಂಬಂಧಿಕರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಸೋಮವಾರ ತಿಳಿಸಿದರು.
ಕೈದಿಗಳಾದ ರಫೀಕ್ ಬಕ್ರಿ,ಭಂವರಲಾಲ್,ಅಂಕಿತ್ ಬನ್ಸಾಲ್ ಮತ್ತು ಕರಣ್ ಗುಪ್ತಾ ಅವರು ನಗರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗಳಿಗಾಗಿ ಅನುಮತಿಗಳನ್ನು ಪಡೆದುಕೊಂಡಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಬದಲು ನಗರದಲ್ಲಿ ಹಾಯಾಗಿ ಸುತ್ತಾಡಲು ಲಂಚ ನೀಡಿದ್ದರು ಎನ್ನಲಾಗಿದೆ. ಓರ್ವ ಕೈದಿ ಮಾತ್ರ ಆಸ್ಪತ್ರೆಯನ್ನು ತಲುಪಿದ್ದ.
ಶನಿವಾರ ಸಂಜೆ 5:30ರ ಗಡುವಿನೊಳಗೆ ಈ ನಾಲ್ವರಲ್ಲಿ ಯಾರೊಬ್ಬರೂ ಜೈಲಿಗೆ ಮರಳಿರಲಿಲ್ಲ.
ಕೈದಿಗಳು ಹೊರಗೆ ಸುತ್ತಾಡಿ ಮೋಜು ಮಾಡಲು ಮಧ್ಯವರ್ತಿಯ ಮೂಲಕ ಸುಮಾರು 25,000 ರೂ.ಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಬೆಂಗಾವಲು ಪೋಲಿಸರಿಗೆ ತಲಾ 5,000 ರೂ.ಗಳನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಜಲುಪುರ ಹೋಟೆಲ್‌ನಲ್ಲಿ ರಫೀಕ್ ತನ್ನ ಪತ್ನಿಯನ್ನು ಮತ್ತು ಭಂವರಲಾಲ್ ತನ್ನ ಗೆಳತಿಯನ್ನು ಭೇಟಿಯಾಗಿದ್ದರು. ಬಳಿಕ ರಫೀಕ್‌ನ ಪತ್ನಿ ಅದೇ ಹೋಟೆಲ್‌ನಲ್ಲಿ ಮಾದಕ ದ್ರವ್ಯಗಳೊಂದಿಗೆ ಸಿಕ್ಕಿಬಿದ್ದಿದ್ದು,ಆಕೆಯ ವಿರುದ್ಧ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ತೇಜಸ್ವಿನಿ ಗೌತಮ ತಿಳಿಸಿದರು.
ಅಂಕಿತ್ ಮತ್ತು ಕರಣ್ ವಿಮಾನ ನಿಲ್ದಾಣದ ಬಳಿಯ ಹೋಟೆಲ್ಲೊಂದರಲ್ಲಿ ಪತ್ತೆಯಾಗಿದ್ದು,ಆ ವೇಳೆ ಪೋಹಾ ಸೇವಿಸುತ್ತಿದ್ದರು. ಹೋಟೆಲ್‌ನಲ್ಲಿ ಕೊಠಡಿಯನ್ನು ಅಂಕಿತ್‌ನ ಗರ್ಲ್‌ಫ್ರೆಂಡ್ ಬುಕ್ ಮಾಡಿದ್ದಳು.
ಬಳಿಕ ಹೋಟೆಲ್‌ವೊಂದರಲ್ಲಿ ಕರಣ್‌ನ ಸಂಬಂಧಿಯೋರ್ವನ್ನು ಬಂಧಿಸಿದ ಪೋಲಿಸರು ಆತನ ಬಳಿಯಿಂದ 45,000 ರೂ.ನಗದು ಮತ್ತು ಹಲವಾರು ಕೈದಿಗಳ ಗುರುತು ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಕ್ಷೆಯನ್ನು ಅನುಭವಿಸುತ್ತಿರುವ,ಈಗಲೂ ಜೈಲಿನೊಳಗಿನಿಂದಲೇ ಕಾರ್ಯ ನಿರ್ವಹಿಸುತ್ತಿರುವ ಹಫ್ತಾ ವಸೂಲಿ ದಂಧೆಕೋರನೋರ್ವ ಕೈದಿಗಳ ಈ ನಗರ ವಿಹಾರದ ರೂವಾರಿಯಾಗಿದ್ದ ಎಂದು ಜೈಲಿನ ಮೂಲಗಳು ತಿಳಿಸಿವೆ.
ಸವಾಯ್ ಮಾನಸಿಂಗ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.