×
Ad

ಶಿಕ್ಷೆ ಪೂರ್ಣಗೊಳಿಸಿದ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

Update: 2025-08-12 20:34 IST

Photo credit: PTI

ಹೊಸದಿಲ್ಲಿ: ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕವೂ ಜೈಲಿನಲ್ಲಿ ಕೊಳೆಯುತ್ತಿರುವ ಕೈದಿಗಳ ಬಗ್ಗೆ ಮಂಗಳವಾರ ಕಳವಳವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ ಅಂತಹ ಕೈದಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು 2002ರ ನಿತೀಶ ಕಟಾರಾ ಕೊಲೆ ಪ್ರಕರಣದಲ್ಲಿ ಸುಖದೇವ್ ಯಾದವ್ ಅಲಿಯಾಸ್ ಪೆಹಲ್ವಾನ್ ಎಂಬಾತನ ಬಿಡುಗಡೆಗೆ ಆದೇಶಿಸಿದ ವೇಳೆ ಈ ನಿರ್ದೇಶನವನ್ನು ಹೊರಡಿಸಿತು. ಈ ವರ್ಷದ ಮಾರ್ಚ್‌ನಲ್ಲಿ ಯಾದವ ಯಾವುದೇ ವಿನಾಯಿತಿಯಿಲ್ಲದೆ 20 ವರ್ಷಗಳ ಜೈಲುಶಿಕ್ಷೆಯನ್ನು ಪೂರ್ಣಗೊಳಿಸಿರುವುದನ್ನು ಅದು ಗಮನಕ್ಕೆ ತೆಗೆದುಕೊಂಡಿತು.

ಯಾವುದೇ ಕೈದಿ ಶಿಕ್ಷೆಯ ಅವಧಿಯನ್ನು ಮೀರಿ ಜೈಲಿನಲ್ಲಿ ಉಳಿದಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಆದೇಶದ ಪ್ರತಿಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳಿಗೆ ಕಳುಹಿಸುವಂತೆ ಪೀಠವು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ಸೂಚಿಸಿತು.

ಶಿಕ್ಷೆಯನ್ನು ಪೂರ್ಣಗೊಳಿಸಿದ ಕೈದಿಗಳು ಇತರ ಯಾವುದೇ ಪ್ರಕರಣಗಳಲ್ಲಿ ಬೇಕಿಲ್ಲದಿದ್ದರೆ ಅವರ ಬಿಡುಗಡೆಗೆ ನಿರ್ದೇಶನಗಳನ್ನು ಹೊರಡಿಸಿ. ತೀರ್ಪಿನ ಅನುಷ್ಠಾನಕ್ಕಾಗಿ ಇಂತಹುದೇ ಪ್ರತಿಯನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ರವಾನಿಸಬೇಕು ಮತ್ತು ಅವರು ಅದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಸೇವಾ ಪ್ರಾಧಿಕಾರಗಳ ಗಮನಕ್ಕೆ ತರಬೇಕು ಎಂದೂ ಸರ್ವೋಚ್ಚ ನ್ಯಾಯಾಲಯವು ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News