×
Ad

ಭಯೋತ್ಪಾದಕ ಸಂಪರ್ಕದ ಶಂಕೆ | ಅನಂತ್‌ನಾಗ್‌ ನಲ್ಲಿ ರೋಹ್ಟಕ್ ನ ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ವಶಕ್ಕೆ ಪಡೆದು ವಿಚಾರಣೆ: ಆರೋಪ ನಿರಾಕರಿಸಿದ ಕುಟುಂಬ

Update: 2025-11-17 23:51 IST

Photo: PTI

ಹೊಸದಿಲ್ಲಿ: ರೋಹ್ಟಕ್ ಮೂಲದ ವೈದ್ಯೆ ಡಾ. ಪ್ರಿಯಾಂಕಾ ಶರ್ಮಾ ಅವರನ್ನು ʼವೈಟ್ ಕಾಲರ್ʼ ಭಯೋತ್ಪಾದಕ ಸಂಪರ್ಕದ ಶಂಕೆಯಿಂದ ಜಮ್ಮು–ಕಾಶ್ಮೀರ ಗುಪ್ತಚರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಸದಸ್ಯರು ಯಾವುದೇ ಆರೋಪಗಳಿಗೆ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು Hindustan Times ವರದಿ ಮಾಡಿದೆ.

ಶನಿವಾರ ಅನಂತ್‌ ನಾಗ್‌ ನ ಮಲಕ್‌ ನಾಗ್ ಪ್ರದೇಶದಲ್ಲಿರುವ ಹಾಸ್ಟೆಲ್‌ ಗೆ ತನಿಖಾಧಿಕಾರಿಗಳು ಭೇಟಿ ನೀಡಿ ಪ್ರಿಯಾಂಕಾ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತ ವಿವರಗಳನ್ನು ರೋಹ್ಟಕ್‌ ನ ಪತ್ರಕರ್ತರೊಂದಿಗೆ ಜನತಾ ಕಾಲೋನಿಯಲ್ಲಿನ ನಿವಾಸದಲ್ಲಿ ಮಾಹಿತಿ ಹಂಚಿಕೊಂಡ ಅವರ ಸಹೋದರ ಭರತ್ ಶರ್ಮಾ, “ಪ್ರಿಯಾಂಕಾ 2023ರಿಂದ ರಜೆ ತೆಗೆದುಕೊಂಡು ಅನಂತ್‌ ನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಶನಿವಾರ ರಾತ್ರಿ 9 ಗಂಟೆಗೆ ವೀಡಿಯೊ ಕಾಲ್ ವೇಳೆ ಹೊರಗಿನ ಅಧಿಕಾರಿಗಳು ಹಾಸ್ಟೆಲ್‌ಗೆ ಬಂದಿರುವುದನ್ನು ಅವರು ತಿಳಿಸಿದ್ದರು. ಬಳಿಕ ಸಂಪರ್ಕ ಕಡಿತಗೊಂಡಿತು,” ಎಂದರು.

ನಂತರ ಭಿವಾನಿಯ ವೈದ್ಯರಾದ ಡಾ. ಅನಿರುದ್ಧ್ ಶರ್ಮಾ - ಡಾ.ಪ್ರಿಯಾಂಕಾ ಅವರ ಸೋದರ ಮಾವ ಕರೆಮಾಡಿ, ವಿಚಾರಣೆಗಾಗಿ ತನಿಖಾಧಿಕಾರಿಗಳು ಅವರನ್ನು ಕರೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದರು. ರಾತ್ರಿ ತಡವಾಗಿ ಪ್ರಿಯಾಂಕಾ ಮತ್ತೆ ಕುಟುಂಬಕ್ಕೆ ಕರೆಮಾಡಿ, ತನಿಖಾಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದರು.

ಭಯೋತ್ಪಾದನಾ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಅದೀಲ್ ಅಹ್ಮದ್ ರಾಥರ್‌ರೊಂದಿಗೆ ಹೊಂದಿರುವ ‘ಸಂಪರ್ಕದ’ ಕುರಿತ ಪ್ರಶ್ನೆಗಳೇ ವಿಚಾರಣೆಯ ಕೇಂದ್ರಬಿಂದು ಎಂದು ತಿಳಿದು ಬಂದಿದೆ. “ಅದೀಲ್ ಅದೇ ವಿಭಾಗದ ಸೀನಿಯರ್ ವೈದ್ಯ. ಸಹೋದ್ಯೋಗಿಯಾಗಿ ಪರಿಚಯವಿತ್ತು ಅಷ್ಟೇ. ಯಾವುದೇ ದೇಶವಿರೋಧಿ ಸಂಬಂಧವಿಲ್ಲ ಎಂಬುದನ್ನು ಪ್ರಿಯಾಂಕಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ,” ಎಂದು ಭರತ್ ನುಡಿದರು.

ಕಾಲೇಜಿನ ಹಾಸ್ಟೆಲ್‌ ಬಿಟ್ಟು ಪ್ರಿಯಾಂಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಸಾಮಾಜಿಕ ಜಾಲತಾಣದ ಸುಳ್ಳು ವರದಿಗಳನ್ನು ಅವರು ತೀವ್ರವಾಗಿ ಖಂಡಿಸಿದರು. “ಶಿಕ್ಷಣಕ್ಕಾಗಿ ಮಾತ್ರ ಅವರು ಅನಂತ್‌ನಾಗ್‌ಗೆ ತೆರಳಿದ್ದರು. ಅಗತ್ಯವಿದ್ದರೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಅವರು ಸಿದ್ಧರಾಗಿದ್ದಾರೆ,” ಎಂದರು.

ಪ್ರಿಯಾಂಕಾ ಸೋಣಿಪತ್‌ ನ ಖಾನ್‌ಪುರ್ ಕಲಾನ್‌ ನಲ್ಲಿರುವ ಭಗತ್ ಫೂಲ್ ಸಿಂಗ್ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಅವರ ತಂದೆ ಸತೀಶ್ ಶರ್ಮಾ ಮೆಹಮ್ ಸಕ್ಕರೆ ಗಿರಣಿಯಲ್ಲಿ ಭದ್ರತಾ ಸಿಬ್ಬಂದಿ, ತಾಯಿ ಗೃಹಿಣಿ. 2019ರಲ್ಲಿ ಎಂಬಿಬಿಎಸ್ ಮುಗಿಸಿದ ಅವರು, 2021ರಲ್ಲಿ ಭಿವಾನಿ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ.ಅನಿರುದ್ಧ್ ಕೌಶಿಕ್ ಅವರನ್ನು ವಿವಾಹವಾಗಿದ್ದರು. ನಂತರ 2023ರಲ್ಲಿ ಅನಂತ್‌ನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಪ್ರವೇಶ ಪಡೆದರು.

ತನಿಖೆಯ ಭಾಗವಾಗಿ ಗುರುಗ್ರಾಮದ ಎಸ್‌ಟಿಎಫ್ ಕೂಡ ಭಿವಾನಿಯಲ್ಲಿರುವ ಪ್ರಿಯಾಂಕಾ ಅವರ ಅತ್ತೆಯ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News