×
Ad

ನ್ಯಾಯಾಧೀಶರ ಕಾರು ಕಸಿದು ರೋಗಿಯನ್ನು ಕರೆದೊಯ್ದ ಎಬಿವಿಪಿ ಕಾರ್ಯಕರ್ತರು: ಕ್ಷಮೆಯಾಚಿಸಿ ಪತ್ರ ಬರೆದ ಶಿವರಾಜ್ ಸಿಂಗ್ ಚೌಹಾಣ್

Update: 2023-12-16 13:20 IST

ಶಿವರಾಜ್ ಸಿಂಗ್ ಚೌಹಾಣ್ (PTI)

ಭೋಪಾಲ್:‌ ಅಸೌಖ್ಯಪೀಡಿತ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲೆಂದು ನ್ಯಾಯಾಧೀಶರೊಬ್ಬರ ಕಾರಿನ ಕೀಲಿಗಳನ್ನು ಕಸಿದು ಆ ವಾಹನವನ್ನು ಬಳಸಿದ್ದಕ್ಕಾಗಿ ಬಂಧಿತರಾಗಿರುವ ಇಬ್ಬರು ಎಬಿವಿಪಿ ಪದಾಧಿಕಾರಿಗಳ ಪರವಾಗಿ ಕ್ಷಮೆಯಾಚಿಸಿ ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ರಾಜ್ಯದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ರವಿ ಮಳಿಮಠ್‌ ಅವರಿಗೆ ಪತ್ರ ಬರೆದಿದ್ದಾರೆ.

ಎಬಿವಿಪಿಯ ಗ್ವಾಲಿಯರ್‌ ಘಟಕದ ಕಾರ್ಯದರ್ಶಿ ಹಿಮಾಂಶು ಶ್ರೋತ್ರಿಯಾ (22) ಮತ್ತು ಉಪ ಕಾರ್ಯದರ್ಶಿ ಸುಕ್ರಿತ್‌ ಶರ್ಮ (24) ಅವರನ್ನು ಡಿಸೆಂಬರ್‌ 11ರಂದು ಮಧ್ಯ ಪ್ರದೇಶದ ಡಕಾಯತಿ ನಿಗ್ರಹ ಕಾಯಿದೆಯಡಿ ಬಂಧಿಸಲಾಗಿತ್ತು. ಗ್ವಾಲಿಯರ್‌ ರೈಲ್ವೆ ನಿಲ್ದಾಣದಲ್ಲಿದ್ದ ಕಾರಿನ ಚಾಲಕನಿಂದ ಕೀ ಸೆಳೆದು ಅವರು‌ ಉತ್ತರ ಪ್ರದೇಶದ ಝಾನ್ಸಿಯ ಖಾಸಗಿ ವಿವಿಯ ಉಪಕುಲಪತಿ ರಂಜೀತ್‌ ಸಿಂಗ್‌ (68) ಎಂಬವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಇಬ್ಬರ ಜಾಮೀನು ಅರ್ಜಿಗಳನ್ನು ಡಿಸೆಂಬರ್‌ 13ರಂದು ತಿರಸ್ಕರಿಸಲಾಗಿತ್ತು.

“ಇದು ಉದಾತ್ತ ಕಾರ್ಯಕ್ಕಾಗಿ ಮಾನವೀಯ ನೆಲೆಯಲ್ಲಿ ವ್ಯಕ್ತಿಯೊಬ್ಬರ ಜೀವವುಳಿಸುವ ಉದ್ದೇಶದಿಂದ ನಡೆಸಿದ ಅಪರಾಧವಾಗಿದೆ. ಹಿಮಾಂಶು ಮತ್ತು ಸುಕ್ರಿತ್‌ ಅವರು ಮಾಡಿದ್ದು ಅಪರಾಧವಲ್ಲ. ಈ ಕಾರಣ ಅವರನ್ನು ಕ್ಷಮಿಸಬೇಕು,” ಎಂದು ಚೌಹಾಣ್‌ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ದಿಲ್ಲಿಯಿಂದ ಗ್ವಾಲಿಯರ್‌ಗೆ ರೈಲಿನಲ್ಲಿ ಪ್ರಯಾಣಿಸುತಿದ್ದ ಕೆಲ ಎಬಿವಿಪಿ ಕಾರ್ಯಕರ್ತರು ಪ್ರಯಾಣಿಕರೊಬ್ಬರ ಆರೋಗ್ಯ ಹದಗೆಡುತ್ತಿರುವುದನ್ನು ಗಮನಿಸಿ ಗ್ವಾಲಿಯರ್‌ ನಿಲ್ದಾಣದಲ್ಲಿ ಕೆಲ ಎಬಿವಿಪಿ ಪದಾಧಿಕಾರಿಗಳಿಗೆ ತಿಳಿಸಿ ಅಸೌಖ್ಯಕ್ಕೀಡಾಗಿದ್ದ ಪ್ರಯಾಣಿಕನನ್ನು ಇಳಿಸಿ ಸುಮಾರು 25 ನಿಮಿಷ ಸಹಾಯಕ್ಕಾಗಿ ಕಾದಿದ್ದರು. ಬಳಿಕ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ಬಳಸಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆತ ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ಧಾರೆಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News