×
Ad

ಚುನಾವಣೆಗೆ ಮುನ್ನ ಬಂಗಾಳವನ್ನು ಗುರಿಯಾಗಿಸಿಕೊಂಡ ‘ವಾಟ್ಸಾಪ್ ಆಯೋಗ’ದಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: S I R ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ವಾದ ಮಂಡಿಸಿದ 'ಲಾಯರ್' ಮಮತಾ ಬ್ಯಾನರ್ಜಿ

Update: 2026-02-04 16:32 IST

Photo: PTI

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಿಧ ಸಮಸ್ಯೆಗಳ ಕುರಿತು ನ್ಯಾಯಾಲಯದ ಗಮನ ಸೆಳೆದರು. ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡು ಚುನಾವಣಾ ಆಯೋಗ ‘ವಾಟ್ಸಾಪ್ ಆಯೋಗ’ದಂತೆ ವರ್ತಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕುತ್ತಿಗೆಗೆ ಕಪ್ಪು ಸ್ಕಾರ್ಫ್ ಧರಿಸಿ ಬಿಳಿ ಉಡುಪಿನಲ್ಲಿ ಹಾಜರಾದ ಬ್ಯಾನರ್ಜಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ.ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಎದುರುಪಕ್ಷದ ವಕೀಲರು ಮಧ್ಯಪ್ರವೇಶಿಸಲು ಯತ್ನಿಸಿದರೂ ಬ್ಯಾನರ್ಜಿ ತಮ್ಮ ಮಾತನ್ನು ಮುಂದುವರಿಸಿದರು.

“ನಾನು ಆ ರಾಜ್ಯಕ್ಕೆ ಸೇರಿದವಳು” ಎಂದು ಬ್ಯಾನರ್ಜಿ ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಕಾಂತ್, “ಯಾವುದೇ ಸಂದೇಹವಿಲ್ಲ, ಮೇಡಂ!” ಎಂದು ಹೇಳಿದರು.

“ನಿಮ್ಮ ದಯೆಯಿಂದಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನ್ಯಾಯಮೂರ್ತಿ ಬಾಗ್ಚಿ ಮತ್ತು ನ್ಯಾಯಮೂರ್ತಿ ಪಾಂಚೋಲಿ ಜಿ ಅವರಿಗೂ ನನ್ನ ವಿನಮ್ರ ನಮನಗಳು…” ಎಂದು ಬ್ಯಾನರ್ಜಿ ಪ್ರತಿಕ್ರಿಯಿಸಿದರು.

ತಮ್ಮ ವಾದ ಮಂಡಿಸಿದ ಬ್ಯಾನರ್ಜಿ, “ಸಮಸ್ಯೆ ಏನೆಂದರೆ ನಮ್ಮ ವಕೀಲರು ಯಾವಾಗಲೂ ನಮ್ಮ ಪ್ರಕರಣವನ್ನು ಮೊದಲಿನಿಂದಲೂ ಹೋರಾಡುತ್ತಿದ್ದಾರೆ. ಆದರೆ ಎಲ್ಲವೂ ಮುಗಿದ ನಂತರ ನಮಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಬಾಗಿಲಿನ ಹಿಂದೆ ಉಳಿಯುತ್ತದೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ ಎಲ್ಲಾ ವಿವರಗಳನ್ನು ಒಳಗೊಂಡಂತೆ ಆರು ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಉತ್ತರವಿಲ್ಲ ಸರ್. ನಾನು ಬಂಧಿತ ಕಾರ್ಮಿಕಳಂತೆ ಇದ್ದೇನೆ ಸರ್. ಬಹುಶಃ ಅದಕ್ಕೆ ಹಣ ನೀಡಬೇಕಾಗಬಹುದು. ನಾನು ತುಂಬಾ ಸಣ್ಣ ವ್ಯಕ್ತಿ. ನಾನು ಸಾಮಾನ್ಯ ಕುಟುಂಬದಿಂದ ಬಂದವಳು. ಆದರೆ ನಾನು ನನ್ನ ಪಕ್ಷಕ್ಕಾಗಿ ಹೋರಾಡುತ್ತಿಲ್ಲ” ಎಂದು ಹೇಳಿದರು.

ಈ ಹಂತದಲ್ಲಿ ಸಿಜೆಐ ಕಾಂತ್ “ಮೇಡಂ ಬ್ಯಾನರ್ಜಿ” ಎಂದು ಮಧ್ಯೆ ಪ್ರವೇಶಿಸಿದರು. “ಪಶ್ಚಿಮ ಬಂಗಾಳ ರಾಜ್ಯವು ತನ್ನದೇ ಆದ ರೀತಿಯಲ್ಲಿ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅತ್ಯುತ್ತಮ ಕಾನೂನು ತಂಡ ರಾಜ್ಯದ ಪರವಾಗಿ ವಾದಿಸುತ್ತಿದೆ” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

ಆದಾಗ್ಯೂ, ನ್ಯಾಯಾಲಯವು ಬ್ಯಾನರ್ಜಿ ಅವರಿಗೆ ವಾದ ಮುಂದುವರಿಸಲು ಅವಕಾಶ ನೀಡಿತು. ರಾಜ್ಯದಲ್ಲಿ ಎದುರಾಗುತ್ತಿರುವ ಕಾರ್ಯವಿಧಾನ ಸಂಬಂಧಿತ ತೊಂದರೆಗಳನ್ನು ಒಪ್ಪಿಕೊಂಡ ಪೀಠ, ಎಲ್ಲರೂ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಯೋಚಿಸಬೇಕೆಂದು ಸೂಚಿಸಿತು.

“ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರವಿದೆ. ಯಾವುದೇ ಮುಗ್ಧ ನಾಗರಿಕನನ್ನು ಬಿಡಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ದಿಸೆಯಲ್ಲಿ ನಾವು ಪರಿಹಾರ ಕಂಡುಕೊಳ್ಳಬೇಕು” ಎಂದು ಸಿಜೆಐ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಲು ಯತ್ನಿಸಿದ ಬ್ಯಾನರ್ಜಿ, “ನೀವು ನನಗೆ ಕೇವಲ ಐದು ನಿಮಿಷಗಳನ್ನು ನೀಡಿದರೆ…” ಎಂದು ಮನವಿ ಮಾಡಿದರು. ಇದಕ್ಕೆ ಧೈರ್ಯ ತುಂಬುವ ಧಾಟಿಯಲ್ಲಿ ಸಿಜೆಐ ಕಾಂತ್, “ಐದು ಅಲ್ಲ, ಹದಿನೈದು ನಿಮಿಷಗಳನ್ನು ನೀಡುತ್ತೇವೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News