ಕಂಗನಾ ರಾಣಾವತ್, ಜಾವೇದ್ ಅಖ್ತರ್ ನಡುವಿನ ಮಾನನಷ್ಟ ಪ್ರಕರಣ ಇತ್ಯರ್ಥ ; ಕ್ಷಮೆಯಾಚಿಸಿದ ನಟಿ ಕಂಗನಾ
Photo: Instagram/KanganaRanaut
ಮುಂಬೈ : ಬಾಲಿವುಡ್ ತಾರೆ ಕಂಗನಾ ರಾಣಾವತ್ ಅವರ ವಿರುದ್ಧ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಹೂಡಿದ್ದ ನಾಲ್ಕು ವರ್ಷಕ್ಕೂ ಹಿಂದಿನ ಮಾನನಷ್ಟ ಮೊಕದ್ದಮೆಯನ್ನು ಶುಕ್ರವಾರ ರಾಜಿ ಮಾಡಿಕೊಳ್ಳುವ ಇತ್ಯರ್ಥ ಮಾಡಿಕೊಂಡಿದ್ದಾರೆ. ತಮ್ಮ ಮಾತುಗಳಿಂದ ಜಾವೇದ್ ಅಖ್ತರ್ ಅವರಿಗೆ ಉಂಟಾದ ಅನಾನುಕೂಲತೆಗೆ ಬಿಜೆಪಿ ಸಂಸದೆ ಕಂಗನಾ ಕ್ಷಮೆಯಾಚಿಸಿದ್ದಾರೆ.
ಶುಕ್ರವಾರ ಇಬ್ಬರೂ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ದೂರುಗಳನ್ನು ಹಿಂಪಡೆಯುವ ನಿರ್ಧಾರವನ್ನು ತಿಳಿಸಿದರು. ನ್ಯಾಯಾಲಯಕ್ಕೆ ಹಾಜರಾದ ನಂತರ, ನಟಿ ಕಂಗನಾ ಅವರು ಅಖ್ತರ್ ಜೊತೆಗಿರುವ ತಮ್ಮ ಫೊಟೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನ ಸ್ಟೋರಿನಲ್ಲಿ ಪೋಸ್ಟ್ ಮಾಡಿ, ನಮ್ಮ ನಡುವಿದ್ದ ಕಾನೂನು ಹೋರಾಟವನ್ನು ಪರಿಹರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯವು ಈ ಬಗ್ಗೆ ಔಪಚಾರಿಕ ಆದೇಶವನ್ನು ನೀಡಲಿದೆ. ತನ್ನ ತಪ್ಪು ತಿಳುವಳಿಕೆಯಿಂದಾಗಿ ಜಾವೆದ್ ಅಖ್ತರ್ ವಿರುದ್ಧ ಹೇಳಿಕೆ ನೀಡಿರುವುದಾಗಿ ನಟಿ ಕಂಗನಾ ಹೇಳಿದ್ದಾರೆ. ಅದರಿಂದಾಗಿ ಅವರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದ್ದಾರೆ.
2020 ಜುಲೈನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟಾಗ, ಕಂಗನಾ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಖ್ತರ್ ಹೆಸರನ್ನು ಎಳೆತಂದಿದ್ದರು. ಈ ಬಗ್ಗೆ ಜಾವೇದ್ ಅಖ್ತರ್ ಅವರು ನಟಿ ಕಂಗನಾ ರಾಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆ ಬಳಿಕ ಕಂಗನಾ ಅವರು ಜಾವೇದ್ ಅಖ್ತರ್ ವಿರುದ್ಧ ಪ್ರತಿದೂರು ದಾಖಲಿಸಿದ್ದರು.
ಕಂಗನಾ ರಾಣಾವತ್ ಅವರ ವಕೀಲ ರಿಜ್ವಾನ್ ಸಿದ್ದೀಕಿ ಮತ್ತು ಜಾವೇದ್ ಅಖ್ತರ್ ಅವರ ವಕೀಲ ಜಯ ಕುಮಾರ್ ಭಾರದ್ವಾಜ್ ಅವರು ಬಾಂದ್ರಾದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಒಂದು ಗಂಟೆಯ ಮಾತುಕತೆಯ ಮೂಲಕ ಈ ವಿಷಯವನ್ನು ರಾಜಿಮಾಡಿಕೊಳ್ಳಲಾಯಿತು ಎಂದು ಹೇಳಿದ್ದಾರೆ.
ತಪ್ಪು ತಿಳುವಳಿಕೆಯಿಂದಾಗಿ ತಾನು ಹೇಳಿಕೆ ನೀಡಿದ್ದೇನೆ ಮತ್ತು ಅದನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ರಾಣಾವತ್ ಅವರು ಮಧ್ಯಸ್ಥಿಕೆ ವಹಿಸಿದ್ದ ವಕೀಲರ ಮುಂದೆ ಹೇಳಿದ್ದಾರೆ ಎಂದು ಅಖ್ತರ್ ಅವರ ವಕೀಲ ಭಾರದ್ವಾಜ್ ಪಿಟಿಐಗೆ ತಿಳಿಸಿದ್ದಾರೆ.
ತನ್ನ ಹೇಳಿಕೆಯಿಂದ ಉಂಟಾದ ಅನಾನುಕೂಲತೆಗಾಗಿ ರಾಣಾವತ್ ಅವರು ಅಖ್ತರ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ, ಭವಿಷ್ಯದಲ್ಲಿ ಅಂತಹ ಹೇಳಿಕೆ ನೀಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಈ ಪ್ರಕರಣವನ್ನು ಆರಂಭದಲ್ಲಿ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆ ನಡೆಸಿತು. 2024 ರಲ್ಲಿ, ರಾಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ (ಸಂಸದ) ಆಯ್ಕೆಯಾದ ನಂತರ, ಈ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
Photo: Instagram/KanganaRanaut