ಸಿಆರ್ಪಿಎಫ್ ಯೋಧನ ಮೇಲೆ ಕನ್ವರಿಯಾಗಳ ಹಲ್ಲೆ: ಕೆಲವು ವ್ಯಕ್ತಿಗಳು ಕನ್ವರ್ ಯಾತ್ರಿಗಳ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದ ಆದಿತ್ಯನಾಥ್!
Photo Credit: PTI
ಮೀರತ್: ಸಾಮಾಜಿಕ ಮಾಧ್ಯಮಗಳಲ್ಲಿ ಕನ್ವರ್ ಯಾತ್ರಿಗಳ ಹೆಸರನ್ನು ಕೆಡಿಸಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ರವಿವಾರ ಆರೋಪಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದಾರಿ ತಪ್ಪಿಸುವ ತುಣುಕುಗಳನ್ನು ಪ್ರತಿ ಕನ್ವರ್ ಸಂಘಗಳೂ ಬಯಲು ಮಾಡಬೇಕು ಎಂದು ತಾಕೀತು ಮಾಡಿದರು.
ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಯೋಗಿ ಆದಿತ್ಯನಾಥ್, “ಕನ್ವರ್ ಯಾತ್ರೆಯಲ್ಲಿ ಉತ್ಸಾಹ ಮತ್ತು ರೋಮಾಂಚನವಿರುವಾಗ, ನಂಬಿಕೆ ಮತ್ತು ಭಕ್ತಿ ಇರುವಾಗ ಕೆಲವು ಶಕ್ತಿಗಳು ನಿರಂತರವಾಗಿ ಈ ಉತ್ಸಾಹಕ್ಕೆ ಧಕ್ಕೆ ತರಲು ಹಾಗೂ ಈ ನಂಬಿಕೆ ಮತ್ತು ಭಕ್ತಿಗೆ ಕಳಂಕ ತರಲು ಪ್ರಯತ್ನಿಸುತ್ತಿವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಿದೆ” ಎಂದೂ ಕರೆ ನೀಡಿದರು.
ಕೇಸರಿ ಬಣ್ಣದ ವಸ್ತ್ರ ಧರಿಸಿರುವ ಕನ್ವರ್ ಯಾತ್ರಿಗಳು ರಸ್ತೆಗಳಲ್ಲಿ ಗದ್ದಲ ಸೃಷ್ಟಿಸುತ್ತಿರುವುದು, ಹೋಟೆಲ್ ಗಳನ್ನು ಧ್ವಂಸಗೊಳಿಸುತ್ತಿರುವುದು, ವಾಹನಗಳನ್ನು ಜಖಂ ಮಾಡುತ್ತಿರುವುದು ಹಾಗೂ ನಾಗರಿಕರನ್ನು ಥಳಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಆದರೆ, ಈ ಆರೋಪಗಳನ್ನು ಅಲ್ಲಗಳೆದ ಯೋಗಿ ಆದಿತ್ಯನಾಥ್, “ಕೆಲವು ದುಷ್ಕರ್ಮಿಗಳು ಕನ್ವರ್ ಯಾತ್ರಿಗಳ ಸೋಗಿನಲ್ಲಿ ಈ ಗುಂಪಿನಲ್ಲಿ ನುಸುಳಿ, ಕನ್ವರ್ ಯಾತ್ರಿಗಳಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ” ಎಂದೂ ಆಪಾದಿಸಿದರು.
“ಅವರನ್ನು ಬೆತ್ತಲುಗೊಳಿಸಿ. ಯಾವ ಬೆಲೆ ತೆತ್ತಾದರೂ ಅವರನ್ನು ನಿಮ್ಮಿಂದ ದೂರವಿಡಿ. ನಿಮ್ಮ ಪರಿಧಿಯನ್ನು ಪ್ರವೇಶಿಸಲು ಅವರಿಗೆ ಅವಕಾಶ ನೀಡಬೇಡಿ. ಜಿಲ್ಲಾಡಳಿತಕ್ಕೆ ತಕ್ಷಣವೇ ಈ ಕುರಿತು ಮಾಹಿತಿ ನೀಡಿ” ಎಂದು ಅವರು ಕನ್ವರ್ ಯಾತ್ರಿಗಳಿಗೆ ಕಿವಿಮಾತು ಹೇಳಿದರು.