ಜಾಮೀನು ಅರ್ಜಿಯ ವಿಚಾರಣೆ ವೇಳೆ ಉಮರ್ ಖಾಲಿದ್ ಭಾಷಣ ತೋರಿಸಿದ ಕಪಿಲ್ ಸಿಬಲ್
“ಗಾಂಧೀಜಿಯ ಮಾರ್ಗ ಉಪದೇಶಿಸಿದರೆ ಪಿತೂರಿಯೇ?” ಎಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ
photo: livelaw.in
ಹೊಸದಿಲ್ಲಿ: ದಿಲ್ಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ತೀವ್ರ ಚರ್ಚೆಗೆ ಕಾರಣವಾಯಿತು. ಖಾಲಿದ್ ಅವರ ಅಮರಾವತಿ ಭಾಷಣದ ವೀಡಿಯೊವನ್ನು ನ್ಯಾಯಾಲಯದಲ್ಲಿ ಪ್ಲೇ ಮಾಡಿದ ಹಿರಿಯ ವಕೀಲ ಕಪಿಲ್ ಸಿಬಲ್, ಆ ಭಾಷಣದಲ್ಲಿ ಪ್ರಚೋದನಕಾರಿ ಅಂಶಗಳೇ ಇಲ್ಲ ಎಂದು ಹೇಳಿದರು.
“ ಒಂದು ಸಂಸ್ಥೆಯಲ್ಲಿರುವ ಒಬ್ಬ ಶಿಕ್ಷಣ ತಜ್ಞ, ವಿದ್ಯಾರ್ಥಿ ಹೋರಾಟಗಾರ ದೇಶವನ್ನು ಉರುಳಿಸಲು ಏನು ಮಾಡಬಲ್ಲರು? ಇಡೀ ಭಾಷಣದಲ್ಲಿ ಕೋಮು ದ್ವೇಷಕ್ಕೆ ಕರೆ ನೀಡಿರುವುದು ಎಲ್ಲಿಯೂ ಕಾಣುವುದಿಲ್ಲ. ಹೈಕೋರ್ಟ್ ಈ ಭಾಷಣವನ್ನು ಆಧರಿಸಿ ಹೇಗೆ ಅವರನ್ನು ಪ್ರಚೋದನಕಾರಿ ಭಾಷಣ ಮಾಡಿದವರಂತೆ ಪರಿಗಣಿಸಿದೆ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಕಪಿಲ್ ಸಿಬಲ್ ತೀವ್ರವಾಗಿ ಪ್ರಶ್ನಿಸಿದರು.
ಖಾಲಿದ್ ಅವರು ತಮ್ಮ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟವನ್ನು ಗಾಂಧೀಜಿಯವರ ಅಹಿಂಸಾ ಮಾರ್ಗಕ್ಕೆ ಹೋಲಿಸಿ, “ದ್ವೇಷಕ್ಕೆ ದ್ವೇಷದಿಂದಲ್ಲ, ಪ್ರೀತಿಯಿಂದ ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿರುವುದನ್ನು ನ್ಯಾಯಾಲಯಕ್ಕೆ ತೋರಿಸಲಾಯಿತು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಪೀಠದ ಮುಂದೆ ಸಿಬಲ್, “ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಪ್ರತಿಯೊಬ್ಬರೂ ನಿರಪರಾಧಿಗಳು. ಈ ವ್ಯಕ್ತಿ ಹೊರಬಂದರೆ ದೇಶಕ್ಕೆ ಯಾವುದೇ ಅಪಾಯವಿಲ್ಲ. ಶಿಕ್ಷೆ ವಿಧಿಸುವಂತೆ ವರ್ಷಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸುವುದು ಸಾರ್ವಜನಿಕ ಹಿತಾಸಕ್ತಿಯಲ್ಲ,” ಎಂದು ಅಭಿಪ್ರಾಯಪಟ್ಟರು.
“ವಿಚಾರಣೆ ಇನ್ನೂ ಮುಗಿಯದಿರುವ ಸ್ಥಿತಿಯಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಅವರನ್ನು ಜೈಲಿನಲ್ಲಿ ಇಡುವುದು ಶಿಕ್ಷೆಗಿಂತ ಬೇರೆ ಏನೂ ಅಲ್ಲ. ಪ್ರತಿಭಟನೆ ಮಾಡಿದ ಕಾರಣಕ್ಕೆ ಶಿಕ್ಷಿಸುವುದು ನಮ್ಮ ಕಾನೂನಿನ ಉದ್ದೇಶವೇನಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಸಿಬಲ್ ದೇಶದಲ್ಲಿ ಸಾಮಾನ್ಯವಾಗಿ ನಡೆಯುವ ಚಕ್ಕಾ-ಜಾಮ್, ರೈಲ್-ರೋಕೋಗಳ ಉದಾಹರಣೆಗಳನ್ನು ನೀಡಿ, “ಗುಜ್ಜರ್ ಹೋರಾಟ, ಕಿಸಾನ್ ಆಂದೋಲನ, ಜಾರ್ಜ್ ಫೆರ್ನಾಂಡಿಸ್ ಕಾಲದ ಆಂದೋಲನ ಇವುಗಳಲ್ಲಿ ಯಾವುದೇ ಯುಎಪಿಎ ಬಳಸಲಿಲ್ಲ. ಇಲ್ಲಿಬ್ಬರು-ಮೂರು ವಿದ್ಯಾರ್ಥಿಗಳು ಕೆಲವು ಪ್ರಶ್ನೆಗಳ ಮೇಲೆ ಆಂದೋಲನ ಮಾಡಿದರೆ ಅದು ಹೇಗೆ ಭಯೋತ್ಪಾದನೆ ಆಗುತ್ತದೆ?” ಎಂದು ಪ್ರಶ್ನಿಸಿದರು.
“ನಮ್ಮ ಕಾಲದಲ್ಲೂ ನಾವು ಪ್ರತಿಭಟನೆ ಮಾಡಿದ್ದೇವೆ. ಕೆಲವರು ನಕ್ಸಲ್ ಚಳುವಳಿಗೂ ಸೇರಿದರು. ಆದರೆ ಪ್ರತಿಭಟನೆ ಮಾಡಿದ ಕಾರಣಕ್ಕೆ ಯಾರನ್ನೂ ಜೈಲಿಗೆ ಹಾಕುವ ಪ್ರಶ್ನೆಯೇ ಬಂದಿರಲಿಲ್ಲ,” ಎಂದು ಕಪಿಲ್ ಸಿಬಲ್ ಅವರು ತಮ್ಮ ವಿದ್ಯಾರ್ಥಿ ದಿನಗಳನ್ನೂ ನೆನಪಿಸಿಕೊಂಡರು.
ಉಮರ್ ಖಾಲಿದ್ ಸೇರಿದಂತೆ ಹಲವರ ಜಾಮೀನು ಅರ್ಜಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದ್ದನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
2021 ರಲ್ಲೇ ಜಾಮೀನು ಪಡೆದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್, ಆಸಿಫ್ ಇಕ್ಬಾಲ್ ತನ್ಹಾ ಉದಾಹರಣೆ ನೀಡಿ,“ಖಾಲಿದ್ ವಿರುದ್ಧ ‘ಪ್ರಚೋದನಕಾರಿ ಭಾಷಣ’ ಆರೋಪ ಹೊರತುಪಡಿಸಿ ಬೇರೆ ಯಾವ ರಹಸ್ಯ ಅಥವಾ ಹಾನಿಕಾರಕ ಕೃತ್ಯವೂ ಇಲ್ಲ,” ಎಂದು ಸಿಬಲ್ ಜಾಮೀನು ನೀಡುವಂತೆ ವಾದ ಮಂಡಿಸಿದರು. ಈಗಾಗಲೇ ಉಮರ್ ಖಾಲಿದ್ 5 ವರ್ಷ ಜೈಲಿನಲ್ಲಿ ಕಳೆದಿರುವುದನ್ನು ಅವರು ಉಲ್ಲೇಖಿಸಿದರು.
ಸೌಜನ್ಯ: livelaw.in