×
Ad

ಮುಂಬೈನಿಂದ ಕತ್ರಾಗೆ ಪ್ರಥಮ ಗೂಡ್ಸ್‌ ರೈಲು: ಮಾರುಕಟ್ಟೆಯ ಮೇಲೆ ಕಣ್ಣು ನೆಟ್ಟ ಕಾಶ್ಮೀರದ ಚೆರ‍್ರಿ ಬೆಳೆಗಾರರು

Update: 2025-05-28 13:32 IST

Photo : PTI

ಶ್ರೀನಗರ: ಕಾಶ್ಮೀರದ ಸೇಬಿನ ಗುಣಮಟ್ಟಕ್ಕೆ ವಿಶ್ವದಾದ್ಯಂತ ಬೇಡಿಕೆಯಿದೆ. ಕಾಶ್ಮೀರ ಹೊರತುಪಡಿಸಿದರೆ ಹಿಮಾಚಲ ಪ್ರದೇಶದ ಸೇಬುಗಳು ಜನಪ್ರಿಯತೆಯಲ್ಲಿ ಎರಡನೆ ಸ್ಥಾನದಲ್ಲಿವೆ. ಹೀಗಾಗಿ, ಈ ಭಾಗದ ಸೇಬು ಬೆಳೆಗಾರರಿಗೆ ವಿಶ್ವಾದ್ಯಂತ ವ್ಯಾಪಕ ಮಾರುಕಟ್ಟೆಯೂ ಲಭ್ಯವಿದೆ.

ಆದರೆ, ಕಾಶ್ಮೀರದ ಮತ್ತೊಂದು ಪ್ರಮುಖ ಬೆಳೆಯಾದ ಚೆರ‍್ರಿಗೆ ಈವರೆಗೆ ಇಂತಹ ಅದೃಷ್ಟ ಖುಲಾಯಿಸಿರಲಿಲ್ಲ. ಈಗ ಈ ಅದೃಷ್ಡವೂ ಕಾಶ್ಮೀರದ ಚೆರ‍್ರಿ ಬೆಳೆಗಾರರಿಗೆ ಖುಲಾಯಿಸಿದ್ದು, ಇದೇ ಪ್ರಥಮ ಬಾರಿಗೆ ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ನೇರವಾಗಿ ಕಾಶ್ಮೀರವನ್ನು ಸಂಪರ್ಕಿಸುವ ಸರಕು ರೈಲು ಸೇವೆ ಪ್ರಾರಂಭಗೊಂಡಿದೆ. ಇದರಿಂದ, ಕಾಶ್ಮೀರದ ಚೆರ‍್ರಿ ಬೆಳೆಗಾರರು ಮೊಗದಲ್ಲಿ ಮಂದಹಾಸ ಮೂಡಿದ್ದು, ಅವರೀಗ ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಯ ಅವಕಾಶಗಳ ಮೇಲೆ ಕಣ್ಣು ನೆಟ್ಟಿದ್ದಾರೆ.

ಈ ಮೂಲಕ ಕಾಶ್ಮೀರ ಕಣಿವೆಯ ಕೊಯಿಲಾಗುತ್ತಿದ್ದಂತೆಯೇ ಬಹುಬೇಗ ಕೊಳೆತು ಹೋಗುವ ಹಣ್ಣಾದ ಚೆರ‍್ರಿಯನ್ನು ದುಬಾರಿ ವಾಯು ಮಾರ್ಗದ ಸಾಗಣೆಗೆ ಪರ್ಯಾಯವಾಗಿ, ಅಗ್ಗದ ದರದಲ್ಲಿ ರೈಲು ಸರಕು ಸಾಗಣೆ ಸೇವೆ ಬಳಸಿಕೊಂಡು ಸಾಗಣೆ ಮಾಡುವ ಅವಕಾಶ ದೊರೆತಂತಾಗಿದೆ. ಇದರಿಂದಾಗಿ ಬಹುದಿನಗಳ ನಿರೀಕ್ಷೆಯಾದ ಮಿತವ್ಯಯ ಸರಕು ಸಾಗಣೆಯ ಅತ್ಯಗತ್ಯ ಸೇವೆ ಕಾಶ್ಮೀರದ ಚೆರ‍್ರಿ ಬೆಳೆಗಾರರಿಗೆ ದೊರೆತಂತಾಗಿದೆ.

ಚೆರ‍್ರಿ ಹಣ್ಣಿನ ನಾಜೂಕು ಸ್ವರೂಪ ಹಾಗೂ ಕೊಯಿಲಾದ ಕೆಲವೇ ದಿನಗಳಲ್ಲಿ ಕೊಳೆತು ಹೋಗುವ ಪ್ರಕೃತಿಯಿಂದಾಗಿ, ಅದನ್ನು ದೂರದ ಮಾರುಕಟ್ಟೆಗಳಾದ ಮುಂಬೈನಂತಹ ಸ್ಥಳಗಳಿಗೆ ವಾಯು ಮಾರ್ಗದ ಮೂಲಕವೇ ಸಾಗಣೆ ಮಾಡಬೇಕು ಎಂಬ ಭಾವನೆ ಹಲವು ದಶಕಗಳಿಂದ ಮನೆ ಮಾಡಿತ್ತು. ಆದರೆ, ವಾಯು ಸಾಗಣೆ ವೆಚ್ಚ ಅತ್ಯಂತ ದುಬಾರಿಯಾಗಿದ್ದುದರಿಂದ, ಸಣ್ಣ ಹಾಗೂ ಅಂಚಿನ ಚೆರ‍್ರಿ ಬೆಳೆಗಾರರು ಈ ಅವಕಾಶದಿಂದ ದೂರವೇ ಉಳಿಯುವಂತಾಗಿತ್ತು. ಆ ಮೂಲಕ, ಅವರ ಮಾರುಕಟ್ಟೆ ಪ್ರವೇಶ ಹಾಗೂ ಆದಾಯ ಗಳಿಕೆಯ ಸಾಮರ್ಥ್ಯ ಸೀಮಿತಗೊಂಡಿತ್ತು.

ಆದರೆ, ಇದೇ ಪ್ರಥಮ ಬಾರಿಗೆ, ಕತ್ರಾದಿಂದ ಮುಂಬೈಗೆ ಪೂರ್ಣ ಪ್ರಮಾಣದ ಪಾರ್ಸೆಲ್ ವ್ಯಾನ್‌ ನ ಕಾರ್ಯಾಚರಣೆಗಾಗಿ ಜಮ್ಮು ರೈಲ್ವೆ ವಲಯವು ಅಧಿಕೃತ ಮನವಿಯಾದ ವಿಪಿ ಇಂಡೆಂಟ್ ಅನ್ನು ಸಲ್ಲಿಸಿದೆ. ಸರಕು ಸಾಗಣೆ ರೈಲಿಗೆ ಹೊಂದಿಕೊಂಡಿರುವ ಶೀತಲೀಕೃತ ಪಾರ್ಸೆಲ್ ವ್ಯಾನ್‌ ನಲ್ಲಿ ಒಂದು ಬಾರಿಗೆ 24 ಟನ್ ತೂಕದ ತಾಜಾ ಚೆರ‍್ರಿ ಹಣ್ಣುಗಳ ಸರಕನ್ನು ಸಾಗಿಸಬಹುದಾಗಿದೆ. ಕತ್ರಾದಿಂದ ಮುಂಬೈಗೆ ಆಗಮಿಸುವ ಈ ಸರಕು ಸಾಗಣೆ ರೈಲಿನ ಪ್ರಯಾಣದ ಅವಧಿ ಸುಮಾರು 30 ಗಂಟೆಗೂ ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಗಂಡೇರ್ಬಲ್ ಜಿಲ್ಲೆಯ ಚೆರ‍್ರಿ ಬೆಳೆಗಾರ ಮನ್ಝೂರ್ ಭಟ್, "ಇದು ನಮ್ಮ ಪಾಲಿಗೆ ಜೀವನಾಡಿಯಾಗಿದೆ. ವಾಯು ಸರಕು ಸಾಗಣೆಯು ನಮ್ಮಂತಹ ಅನೇಕರ ಪಾಲಿಗೆ ಭರಿಸಲಸಾಧ್ಯವಾಗಿತ್ತು. ಈ ಸರಕು ಸಾಗಣೆ ರೈಲು ಸೇವೆಯಿಂದಾಗಿ, ನಾವು ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವ ಕುರಿತು ಯೋಚಿಸಬಹುದಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕತ್ರಾದಿಂದ ಮುಂಬೈಗೆ ಪ್ರಾಯೋಗಿಕವಾಗಿ ಪ್ರಾರಂಭಗೊಂಡಿರುವ ಈ ಸರಕು ಸಾಗಣೆ ರೈಲು ಸೇವೆಯೇನಾದರೂ ಯಶಸ್ವಿಯಾದರೆ, ಕಾಶ್ಮೀರದ ಕಣಿವೆಯಿಂದ ಮತ್ತಷ್ಟು ಚೆರ‍್ರಿ ಹಾಗೂ ಇನ್ನಿತರ ಹಣ್ಣುಗಳ ನಿಯಮಿತ ಹಾಗೂ ಮಿತವ್ಯಯಕಾರಿ ರಫ್ತಿಗೆ ಬಾಗಿಲು ತೆರೆದುಕೊಳ್ಳಲಿದೆ. ಆ ಮೂಲಕ ಈ ಪ್ರಾಂತ್ಯದ ತೋಟಗಾರಿಕೆ ಸರಕು ಸಾಗಣೆ ಸಾಧ್ಯತೆ ಹಾಗೂ ಬಹುಶಃ ಆರ್ಥಿಕ ಭವಿಷ್ಯ ರೂಪಾಂತರಗೊಳ್ಳಲಿದೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News