×
Ad

ಕೇರಳ | NH 66ರಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಕುಸಿತ; ಹಲವರಿಗೆ ಗಾಯ

Update: 2025-05-19 20:35 IST

Photo Credit: SAKKEER HUSSAIN \ thehindu.com

ಮಲಪ್ಪುರಂ: ಕೇರಳದ ರಾಷ್ಟ್ರೀಯ ಹೆದ್ದಾರಿ 66ರ ತಿರುರಂಗಡಿ ಬಳಿಯ ಕೂರಿಯಾಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಒಂದರ ಭಾಗ ಸೋಮವಾರ ಮಧ್ಯಾಹ್ನ ಕುಸಿದಿದ್ದು, ಹಲವಾರು ವಾಹನ ಸವಾರರಿಗೆ ಗಾಯಗಳಾಗಿದೆ. ಫ್ಲೈ ಓವರ್ ಕುಸಿತದಿಂದ ಕಾಕ್ಕಡ್ ಮತ್ತು ತಲಪ್ಪರ ನಡುವಿನ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.

ಕೂರಿಯಾಡ್ನ ಭತ್ತದ ಗದ್ದೆಗಳಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಫ್ಲೈ ಓವರ್ ನಒಂದು ಭಾಗವು ಸುಮಾರು 30 ಅಡಿ ಆಳಕ್ಕೆ ಕುಸಿದಿದ್ದರಿಂದ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೂರು ಕಾರುಗಳಿಗೆ ಹಾನಿಯಾಗಿದೆ. ಫ್ಲೈ ಓವರ್ ಕುಸಿಯುತ್ತಿದ್ದಂತೆ ಬಂಡೆ ಕ್ಲಲುಗಳು ಎತ್ತರದಿಂದ ಕೆಳಗೆ ಬಿದ್ದಿದ್ದರಿಂದ ಪ್ರಯಾಣಿಕರು ತಮ್ಮ ಕಾರುಗಳನ್ನು ಬಿಟ್ಟು ರಕ್ಷಣೆಗಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದರೆ. ಈ ಸಂದರ್ಭ ಕನಿಷ್ಠ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಫ್ಲೈ ಓವರ್ ಕುಸಿತದಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿರುವ ಸರ್ವಿಸ್ ರಸ್ತೆಗಳು ಆಳವಾದ ಬಿರುಕುಗಳೊಂದಿಗೆ ತೀವ್ರವಾಗಿ ಹಾನಿಗೊಳಗಾಗಿದೆ. ಮಣ್ಣು ತೆಗೆಯುತ್ತಿದ್ದ ಯಂತ್ರವೂ ಬಿದ್ದಿದೆ. ತಗ್ಗು ಪ್ರದೇಶದಲ್ಲಿ ಫ್ಲೈ ಓವರ್ ನಿರ್ಮಾಣವಾಗುತ್ತಿರುವುದರಿಂದ ಮತ್ತಷ್ಟು ಕುಸಿತವಾಗುವ ಸಂಭವವಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯವಾಗಿ ವಿಕೆ ಪಾಡಿಯಿಂದ ಮಂಬುರಂ ಮೂಲಕ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಿರುಗಿಸಲಾಗಿದೆ. ಕೂರಿಯಾಡ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಸಂಚಾರವನ್ನು ಪುನಃಸ್ಥಾಪಿಸಲು ಒಂದೆರಡು ದಿನಗಳು ಬೇಕಾಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಪಿ.ಎ. ಮಜೀದ್ ಸ್ಥಳಕ್ಕೆ ಫ್ಲೈ ಓವರ್ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ಆರೋಪಿಸಿದ್ದಾರೆ.

“ಕೂರಿಯಾಡ್ ನಂತಹ ತಗ್ಗು ಪ್ರದೇಶದಲ್ಲಿ ಕಳಪೆ ಗುಣಮಟ್ಟದ ಒಡ್ಡು ನಿರ್ಮಿಸಲಾಗಿದೆ. ಈ ಅವೈಜ್ಞಾನಿಕ ವಿಧಾನದ ಬಗ್ಗೆ ನಾವು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ. ಅವರು ನಮ್ಮ ಎಚ್ಚರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ಕಳೆದ ವರ್ಷವೂ ಮಳೆ ಪ್ರಾರಂಭವಾದಾಗ, ಹೆದ್ದಾರಿಯು ಇದೇ ರೀತಿಯ ಕುಸಿತಕ್ಕೆ ಸಾಕ್ಷಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದೇ ರೀತಿಯ ಧೋರಣೆ ಮುಂದುವರಿಸಿದರೆ ಭವಿಷ್ಯದಲ್ಲಿ ಅವರು ಭಾರಿ ಬೆಲೆ ತೆರಬೇಕಾಗುತ್ತದೆ,” ಎಂದು ಎಂದು ಶಾಸಕ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿಗಳೂ ಹೆದ್ದಾರಿ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ NH 66 ರ ಉದ್ದಕ್ಕೂ ಸರ್ವಿಸ್ ರೋಡ್ ನ ಹಲವಾರು ಭಾಗಗಳು ಕಳೆದ ವರ್ಷ ಮಳೆಯಿಂದ ಕುಸಿದಿತ್ತು. ಆದರೆ ಕೂರಿಯಾಡ್ ನಲ್ಲಿ ಸೋಮವಾರ ಸಂಭವುವಿಸಿದ ಫ್ಲೈ ಓವರ್ ಕುಸಿತವು ಇದುವರೆ ಸಂಭವಿಸಿದ ಕುಸಿತಗಳಲ್ಲಿ ದೊಡ್ಡದು ಎನ್ನಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News