×
Ad

Kerala| ಬಸ್ಸಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ: ವೀಡಿಯೊ ವೈರಲ್ ಬೆನ್ನಲ್ಲೇ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2026-01-19 14:57 IST

 ದೀಪಕ್ |  Photo Credit : thenewsminute.com

ಕೋಝಿಕೋಡ್: ಬಸ್ಸಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ 42 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಗೋವಿಂದಪುರದಲ್ಲಿ ವಾಸಿಸುತ್ತಿದ್ದ ಪುತಿಯಾರ ಮೂಲದ ದೀಪಕ್ ಯು ಎಂದು ಗುರುತಿಸಲಾಗಿದೆ. ರವಿವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದೀಪಕ್ ಅವರನ್ನು ಎಬ್ಬಿಸಲು ಪೋಷಕರು ಕೊಠಡಿಯ ಬಾಗಿಲು ಬಡಿದಿದ್ದಾರೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ನೆರೆಹೊರೆಯವರ ಸಹಾಯದಿಂದ ಕೊಠಡಿಯ ಬಾಗಿಲು ತೆಗೆದಾಗ ದೀಪಕ್ ಸೀಲಿಂಗ್ ಫ್ಯಾನ್‌ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ದೀಪಕ್ ಜವಳಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಶುಕ್ರವಾರ ಕೆಲಸದ ನಿಮಿತ್ತ ಕಣ್ಣೂರಿಗೆ ಪ್ರಯಾಣಿಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದೇ ದಿನ ಅವರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ದೀಪಕ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವೀಡಿಯೊ ವೈರಲ್‌ ಮಾಡಿದ್ದರು. ಅದು ದೀಪಕ್ ಅವರ ಗಮನಕ್ಕೂ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಗಳ ಪ್ರಕಾರ, ದೀಪಕ್ ಈ ಆರೋಪವನ್ನು ನಿರಾಕರಿಸಿದ್ದು, ವೀಡಿಯೊ ವೈರಲ್ ಆದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ವೈದ್ಯಕೀಯ ಕಾಲೇಜು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಶಂಕಿತ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News