ಕೇರಳ | ಬ್ಯಾಂಕ್ ಕ್ಯಾಂಟೀನ್‌ನಲ್ಲಿ ಬೀಫ್ ನಿಷೇಧಿಸಿದ ಬಿಹಾರ ಮೂಲದ ಮ್ಯಾನೇಜರ್
ಬೀಫ್ ಸೇವಿಸಿ ನೌಕರರಿಂದ ಪ್ರತಿಭಟನೆ
Photo | indiatoday
ಕೊಚ್ಚಿ : ಕೇರಳದ ಕೊಚ್ಚಿಯ ಕೆನರಾ ಬ್ಯಾಂಕ್ ಶಾಖೆಯ ಕ್ಯಾಂಟೀನ್‌ನಲ್ಲಿ ಬೀಫ್ (ಗೋಮಾಂಸ) ನಿಷೇಧಿಸುವಂತೆ ಮ್ಯಾನೇಜರ್ ಆದೇಶಿಸಿದ ಹಿನ್ನೆಲೆ ಆಕ್ರೋಶಗೊಂಡ ಬ್ಯಾಂಕ್ ನೌಕರರು ಬೀಫ್ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಬಿಹಾರ ಮೂಲದ ಹೊಸದಾಗಿ ನೇಮಕಗೊಂಡ ಪ್ರಾದೇಶಿಕ ವ್ಯವಸ್ಥಾಪಕ ಕೇರಳದ ಪಾಕಪದ್ಧತಿಯ ಪ್ರಮುಖ ಆಹಾರವಾದ ಬೀಫ್ ಅನ್ನು ಕ್ಯಾಂಟೀನ್‌ನಲ್ಲಿ ಬಡಿಸದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಯ ಪ್ರಕಾರ, ಆರಂಭದಲ್ಲಿ ಬ್ಯಾಂಕ್ ವ್ಯವಸ್ಥಾಪಕನ ಕಿರುಕುಳ ಮತ್ತು ಅವಮಾನಕರ ನಡವಳಿಕೆ ಆರೋಪವನ್ನು ಖಂಡಿಸಿ ಬ್ಯಾಂಕ್ ನೌಕರರ ಒಕ್ಕೂಟ(BEFI) ಪ್ರತಿಭಟನೆ ಹಮ್ಮಿಕೊಂಡಿತ್ತು. ಆ ಬಳಿಕ ಮಾಂಸ ನಿಷೇಧದ ಆದೇಶದ ಬಗ್ಗೆ ತಿಳಿದು ಪ್ರತಿಭಟನಾಕಾರರು ಬೀಫ್-ಪರೋಟ ಸೇವಿಸಿ ಗೋಮಾಂಸ ನಿಷೇಧಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
"ಇಲ್ಲಿ ಒಂದು ಸಣ್ಣ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಕೆಲವೊಮ್ಮೆ ಕ್ಯಾಂಟೀನ್‌ನಲ್ಲಿ ಬೀಫ್ ಬಡಿಸಲಾಗುತ್ತಿದೆ. ಆದರೆ ಇನ್ನು ಮುಂದೆ ಬೀಫ್ ಬಡಿಸದಂತೆ ವ್ಯವಸ್ಥಾಪಕರು ಕ್ಯಾಂಟೀನ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಬ್ಯಾಂಕ್ ಸಂವಿಧಾನದ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಆಹಾರವು ವೈಯಕ್ತಿಕ ಆಯ್ಕೆಯಾಗಿದೆ. ಭಾರತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಹಾರವನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ನಾವು ಯಾರನ್ನೂ ಬೀಫ್ ತಿನ್ನುವಂತೆ ಒತ್ತಾಯಿಸುತ್ತಿಲ್ಲ. ಇದು ಕೇವಲ ನಮ್ಮ ಪ್ರತಿಭಟನೆಯ ರೂಪವಾಗಿದೆ” ಎಂದು ಬ್ಯಾಂಕ್ ನೌಕರರ ಒಕ್ಕೂಟ ಎಸ್.ಎಸ್. ಅನಿಲ್ ಹೇಳಿದರು.
ಶಾಸಕ ಕೆ.ಟಿ. ಜಲೀಲ್ ಬ್ಯಾಂಕ್ ನೌಕರರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಕೇರಳದಲ್ಲಿ ಸಂಘ ಪರಿವಾರದ ಕಾರ್ಯಸೂಚಿಗಳಿಗೆ ಅವಕಾಶ ನೀಡುವುದಿಲ್ಲ. ಏನು ಧರಿಸಬೇಕು, ಏನು ತಿನ್ನಬೇಕು ಮತ್ತು ಏನು ಯೋಚಿಸಬೇಕು ಎಂಬುದನ್ನು ಮೇಲಧಿಕಾರಿಗಳು ನಿರ್ಧರಿಸಬಾರದು. ಈ ಮಣ್ಣು ಕೆಂಪು. ಈ ನೆಲದ ಹೃದಯ ಕೆಂಪು. ಕೆಂಪು ಧ್ವಜ ಹಾರುವಲ್ಲೆಲ್ಲಾ, ನೀವು ಭಯವಿಲ್ಲದೆ ಫ್ಯಾಸಿಸ್ಟ್‌ಗಳ ವಿರುದ್ಧ ಮಾತನಾಡಬಹುದು ಮತ್ತು ವರ್ತಿಸಬಹುದು. ಯಾರೂ ನಿಮಗೆ ಹಾನಿ ಮಾಡುವುದಿಲ್ಲ. ಕಮ್ಯುನಿಸ್ಟರು ಒಗ್ಗಟ್ಟಾದಾಗ, ಕಾಮ್ರೇಡ್‌ಗಳು ಕೇಸರಿ ಧ್ವಜವನ್ನು ಹಾರಿಸಲು ಮತ್ತು ಜನರ ಯೋಗಕ್ಷೇಮವನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಅದು ಜಗತ್ತು. ಅದು ಜಗತ್ತಿನ ಇತಿಹಾಸ ಎಂದು ಕೆಟಿ ಜಲೀಲ್ ಹೇಳಿದ್ದಾರೆ.