ಕೇರಳ | ಪೊಲೀಸ್ ಠಾಣೆಯಲ್ಲಿ ದಲಿತ ಮಹಿಳೆಗೆ ಕಸ್ಟಡಿ ಕಿರುಕುಳದ ಆರೋಪ
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಮನೆ ಕೆಲಸದಾಳುವಾಗಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯೋರ್ವರಿಗೆ ಚಿನ್ನ ಕಳ್ಳತನದ ಸುಳ್ಳು ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಕಿರುಕುಳದ ನೀಡಲಾಗಿದೆ. ಈ ಕುರಿತು ಸಿಎಂ ಕಚೇರಿಗೆ ದೂರು ನೀಡಿದರೂ, ನಿರ್ಲಕ್ಷತೆ ವಹಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತ ಮಹಿಳೆಯನ್ನು ತಿರುವನಂತಪುರಂ ಮೂಲದ ಬಿಂದು(39) ಎಂದು ಗುರುತಿಸಲಾಗಿದೆ. ಓಮನಾ ಡೇವಿಸ್ ಎಂದು ಗುರುತಿಸಲಾದ ಆಕೆಯ ಉದ್ಯೋಗದಾತ ಎರಡು ಪವನ್ ತೂಕದ ಚಿನ್ನದ ಸರವನ್ನು ಬಿಂದು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಂದು ಅವರನ್ನು ಏಪ್ರಿಲ್ 23 ರಂದು ಪೆರೂರ್ಕಡ ಪೊಲೀಸ್ ಠಾಣೆಯಲ್ಲಿ ರಾತ್ರಿಯಿಡೀ ಕಸ್ಟಡಿಯಲ್ಲಿ ಇರಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಎಂದು ಅವರು ಆರೋಪಿಸಿದ್ದಾರೆ.
ಆಹಾರ ನೀರು ನಿರಾಕರಿಸಿದ ಪೊಲೀಸರು, ಶೌಚಾಲಯದ ನೀರು ಕುಡಿಯುವಂತೆ ತನಗೆ ಹೇಳಿದ್ದಾರೆ. ಉದ್ಯೋಗದಾತ ಮನೆಯಲ್ಲಿ ಚಿನ್ನದ ಸರ ಪತ್ತೆಯಾಗಿದೆ ಎಂದು ಹೇಳಿದ ಬಳಿಕವೂ ಪೊಲೀಸರು 20 ಗಂಟೆ ಕಸ್ಟಡಿಯಲ್ಲಿ ಇರಿಸಿಕೊಂಡು ಕಿರುಕುಳ ಮುಂದುವರೆಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳಕೂಡದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸುಳ್ಳು ಪ್ರಕರಣದಲ್ಲಿ ಕಸ್ಟಡಿಯಲ್ಲಿ ಬಂಧಿಯಾಗಿದ್ದ ದಲಿತ ಮಹಿಳೆ ಬಿಂದು ಹೇಳಿಕೊಂಡಿದ್ದಾರೆ.
ಬಿಂದು ಅವರು ತಮ್ಮ ವಕೀಲರೊಂದಿಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಪಿ. ಶಶಿ ಅವರಿಗೆ ಈ ಕುರಿತು ದೂರು ಸಲ್ಲಿಸಿದ್ದೆ. ಆದರೆ ಶಶಿ ದೂರನ್ನು ನಿರ್ಲಕ್ಷಿಸಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುವಂತೆ ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಕೆಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಶಿ, "ಅಗತ್ಯ ಕ್ರಮಕ್ಕಾಗಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ”, ಎಂದು ಹೇಳಿದ್ದಾರೆ.
ಘಟನೆಯ ಗಾಂಬೀರ್ಯತೆ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಪಿಎಂ ನೇತೃತ್ವದ ಕೇರಳ ಸರಕಾರವು ಮುಜುಗರ ತಪ್ಪಿಕೊಳ್ಳಲು ಸಬ್-ಇನ್ಸ್ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿ ಪ್ರಸಾಸ್ ಅವರನ್ನು ಸೋಮವಾರ ಅಮಾನತುಗೊಳಿಸಿದೆ.
ಈ ಘಟನೆಯ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿದೆ. ವಿರೋಧ ಪಕ್ಷಗಳು ಸರ್ಕಾರ ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವನ್ನು ಕಾಯ್ದುಕೊಂಡಿದೆ ಎಂದು ಆರೋಪಿಸಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿವೆ.
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಸೌಜನ್ಯ: deccanherald.com