11 ವರ್ಷದ ಮಕ್ಕಳು ಕೂಡಾ ಮಾದಕ ವ್ಯಸನಕ್ಕೆ ಬಲಿ : ಸಮೀಕ್ಷೆಯಿಂದ ಬಹಿರಂಗ
ಸಾಂದರ್ಭಿಕ ಚಿತ್ರ | PC : freepik
ಹೊಸದಿಲ್ಲಿ: ವಿದ್ಯಾರ್ಥಿಗಳು ತಮ್ಮ 11ನೇ ವಯಸ್ಸಿನಲ್ಲೇ ಮಾದಕವಸ್ತುಗಳ ಬಳಕೆ ಮಾಡುತ್ತಾರೆ ಮತ್ತು ಸರಾಸರಿ 12.9 ವಯಸ್ಸಿನ ಮಕ್ಕಳು ಮಾದಕ ವಸ್ತು ಸೇವನೆ ಆರಂಭಿಸುತ್ತಾರೆ ಎಂಬ ಆತಂಕಕಾರಿ ಅಂಶ ದೇಶದ 10 ನಗರಗಳಲ್ಲಿ ನಡೆಸಿದ ಪ್ರಮುಖ ಶಾಲಾ ಸಮೀಕ್ಷೆಯಿಂದ ಬಹಿರಂಗವಾಗಿದೆ.
ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ಈ ಸಮೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಪ್ರತಿ ಏಳು ವಿದ್ಯಾರ್ಥಿಗಳ ಪೈಕಿ ಒಬ್ಬರು ಕನಿಷ್ಠ ಒಂದು ಬಾರಿಯಾದರೂ ಡ್ರಗ್ಸ್ ಬಳಕೆ ಮಾಡಿರುತ್ತಾರೆ ಎಂದು ತಿಳಿದುಬಂದಿದೆ.
ದೆಹಲಿ, ಬೆಂಗಳೂರು, ಮುಂಬೈ, ಲಕ್ನೋ, ಚಂಡೀಗಢ, ಹೈದರಾಬಾದ್, ಇಂಫಾಲ, ಜಮ್ಮು, ದಿಬ್ರೂಗಢ ಮತ್ತು ರಾಂಚಿಯ ಸುಮಾರು 14.7 ವಯಸ್ಸಿನ 5,920 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಗರಿಪಡಿಸಲಾಗಿತ್ತು. ಈ ಪೈಕಿ ಶೇ.15.1ರಷ್ಟು ವಿದ್ಯಾರ್ಥಿಗಳು ಕನಿಷ್ಠ ಒಮ್ಮೆಯಾದರೂ ಮಾದಕ ವಸ್ತು ಬಳಸಿದ್ದಾರೆ. ಶೇ.10.3ರಷ್ಟು ವಿದ್ಯಾರ್ಥಿಗಳು ಕಳೆದ ಒಂದು ವರ್ಷದಲ್ಲಿ ಹಾಗೂ ಶೇ.7.2ರಷ್ಟು ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಲ್ಲಿ ಬಳಸಿದ್ದಾರೆ.
ಗರಿಷ್ಠ ಅಂದರೆ ಶೇ.4ರಷ್ಟು ವಿದ್ಯಾರ್ಥಿಗಳು ತಂಬಾಕು ಸೇವಿಸಿದ್ದು, ಬಳಿಕ ಮದ್ಯಸೇವನೆ ಪ್ರಮಾಣ ಶೇ.3.8ರಷ್ಟಿದೆ. ಉಳಿದಂತೆ ಮಾದಕ ನೋವು ನಿವಾರಕ (2.8), ಗಾಂಜಾ (2) ಮತ್ತು ಆಘ್ರಾಣಿಸುವ ಮಾದವಸ್ತುಗಳನ್ನು ಹೆಚ್ಚಾಗಿ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಬಹುತೇಕ ನೋವು ನಿವಾರಕಗಳನ್ನು ಮೆಡಿಕಲ್ ಸ್ಟೋರ್ ಗಳಿಂದ ವೈದ್ಯರ ಸಲಹೆ ಇಲ್ಲದೇ ಪಡೆಯುತ್ತಿದ್ದಾರೆ.
ದೆಹಲಿ ಎಐಐಎಂಎಸ್‍ನ ರಾಷ್ಟ್ರೀಯ ಡ್ರಗ್ ಅವಲಂಬನೆ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ.ಅನೂಜ್ ಧವನ್ ನೇತೃತ್ವದ ತಂಡ ಅಧ್ಯಯನ ನಡೆಸಿದ್ದು, ಚಂಡೀಗಢ, ದಿಬ್ರೂಗಢ, ಲಕ್ನೋ, ಬೆಂಗಳೂರು, ಶ್ರೀನಗರ, ಇಂಫಾಲ, ಮುಂಬೈ, ಹೈದರಾಬಾದ್ ಮತ್ತು ರಾಂಚಿಯ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಈ ಅಧ್ಯಯನ ನಡೆಸಲಾಗಿತ್ತು.