ಪತಿಯನ್ನು ಕೊಂದು ಚೀಲದಲ್ಲಿ ಮೃತದೇಹ ತುಂಬಿದ ಪತ್ನಿ
ರಾಯಪುರ: "ನಿನ್ನ ತಂದೆಯನ್ನು ಹತ್ಯೆ ಮಾಡಿ ಮೃತದೇಹವನ್ನು ಚೀಲದಲ್ಲಿ ತುಂಬಿಟ್ಟಿದ್ದೇನೆ" ಎಂದು ತಾಯಿಯೇ ಸ್ವತಃ ದೂರವಾಣಿ ಕರೆ ಮಾಡಿ 23 ವರ್ಷದ ನವವಿವಾಹಿತೆ ಪುತ್ರಿಗೆ ಮಾಹಿತಿ ನೀಡಿದ ಅಪರೂಪದ ಪ್ರಕರಣ ಛತ್ತಿಸ್ ಗಢದ ಜಶ್‍ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಂಗ್ರಿತಾ ಎಂಬ ಮಹಿಳೆ ಈ ಕೃತ್ಯ ಎಸಗಿ ಯಾವುದೇ ಸುಳಿವು ಉಳಿಯದಂತೆ ಅಳಿಸಿಹಾಕಿದ ಬಳಿಕ ಕರೆ ಮಾಡಿ ಪುತ್ರಿಗೆ ಮಾಹಿತಿ ನೀಡಿದ್ದಳು.
ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಮಹಿಳೆ ಜಶ್‍ಪುರದ ಭಿಂಜ್‍ಪುರಕ್ಕೆ ಕೆಲ ತಿಂಗಳ ಹಿಂದೆ ವಾಪಸ್ಸಾಗಿದ್ದಳು. ಆ ಬಳಿಕ ಪತಿ ಸಂತೋಷ್ ಭಗತ್ (43)ಜತೆ ಸದಾ ಜಗಳವಾಡುತ್ತಿದ್ದಳು ಎಂದು ನೆರೆಹೊರೆಯವರು ಹೇಳಿದ್ದಾರೆ.
ತಾಯಿಯ ಕರೆಯಿಂದ ಆಘಾತಗೊಂಡ ಪುತ್ರಿ ಹಾಗೂ ಆಕೆಯ ಪತಿ ಸಂಬಂಧಿಕರಿಗೆ ಮಾಹಿತಿ ನೀಡಿ ಭಿಂಜ್‍ಪುರಕ್ಕೆ ಧಾವಿಸಿದರು. ಮನೆಗೆ ಬಂದು ನೋಡಿದಾಗ ಹೊದಿಕೆಯಿಂದ ಸುತ್ತಿದ್ದ ಭಗತ್ ಮೃತದೇಹ ಟ್ರಾಲಿಬ್ಯಾಗ್‍ನಲ್ಲಿ ಕಂಡುಬಂದಿದೆ. ಭಗತ್ ಅವರ ಅಣ್ಣ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಎಸ್ಪಿ ಶಶಿಮೋಹನ್ ಸಿಂಗ್ ಹೇಳಿದ್ದಾರೆ.
ಮಂಗ್ರಿತಾ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಿಸಿ, ಆಕೆಯ ಪತ್ತೆಗೆ ಜಾಲ ಬೀಸಲಾಗಿದೆ. ಪೊಲೀಸರ ಒಂದು ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಮೂಗು ಮತ್ತು ಬಾಯಿಯಿಂದ ರಕ್ತ ಸೋರಿ ಭಗತ್ ಮೃತಪಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹವನ್ನು ಅಟಾಪ್ಸಿಗೆ ಕಳುಹಿಸಲಾಗಿದ್ದು, ಹರಿತವಾದ ಆಯುಧದಿಂದ ಶಿರಕ್ಕೆ ಹೊಡೆದ ಕಾರಣ ಸಾವು ಸಂಭವಿಸಿರಬೇಕು ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.