ವಿವಾದಕ್ಕೆ ಕಾರಣವಾದ ಕುನಾಲ್ ಕಾಮ್ರಾ ಧರಿಸಿದ ‘ಆರೆಸ್ಸೆಸ್ ಟಿ-ಶರ್ಟ್’; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಿಜೆಪಿ-ಶಿವಸೇನೆ
ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ವನ್ನು ಅಪಹಾಸ್ಯ ಮಾಡುವ ಸಂದೇಶವಿರುವ ಟಿ-ಶರ್ಟ್ ಧರಿಸಿದ ಫೋಟೋ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಕಾಮ್ರಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಸೋಮವಾರ ಕಾಮ್ರಾ ಸಾಮಾಜಿಕ ಜಾಲತಾಣ X ನಲ್ಲಿ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಆರೆಸ್ಸೆಸ್ ಅನ್ನು ಅಪಹಾಸ್ಯ ಮಾಡಿದ್ದಾರೆ ಎನ್ನಲಾದ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ರಾಜಕೀಯವಾಗಿ ಚರ್ಚೆಗೆ ಕಾರಣವಾಯಿತು.
“ಇಂತಹ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ” ಎಂದು ಬಿಜೆಪಿಯ ಹಿರಿಯ ನಾಯಕ ಚಂದ್ರಶೇಖರ್ ಬವಾಂಕುಲೆ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ಸಚಿವ ಸಂಜಯ್ ಶಿರ್ಸಾತ್, “ಹಿಂದೆಯೂ ಅವರು ಪ್ರಧಾನಿ ಮೋದಿ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡಿದ್ದರು. ಈಗ ನೇರವಾಗಿ ಆರೆಸ್ಸೆಸ್ ವಿರುದ್ಧ ಮಾತನಾಡಲು ಧೈರ್ಯ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಗಂಭೀರವಾಗಿ ಪ್ರತಿಕ್ರಿಯಿಸಬೇಕಾಗಿದೆ” ಎಂದು ಹೇಳಿದರು.
“ಈ ವರ್ಷದ ಆರಂಭದಲ್ಲಿ ಶಿಂಧೆ ವಿರುದ್ಧ ಟೀಕೆ ಮಾಡಿದಾಗ ನಾವು ಪ್ರತಿಕ್ರಿಯಿಸಿದ್ದೇವೆ. ಈಗ ಸಂಘದ ವಿರುದ್ಧವೇ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಾರೆ” ಎಂದು ಅವರು ಉಲ್ಲೇಖಿಸಿದರು.
ತಮ್ಮ ಸ್ಟ್ಯಾಂಡಪ್ ಕಾಮಿಡಿಗಳಲ್ಲಿ ರಾಜಕೀಯ ವ್ಯಂಗ್ಯಕ್ಕೆ ಪ್ರಸಿದ್ಧರಾಗಿರುವ ಕಾಮ್ರಾ, ಶಿಂಧೆ ಕುರಿತು ಮಾಡಿದ ಟೀಕೆಯಿಂದ ಹಿಂದೆಯೂ ವಿವಾದಕ್ಕೊಳಗಾಗಿದ್ದರು. ಮಾರ್ಚ್‌ನಲ್ಲಿ ನಡೆದ ತಮ್ಮ ಸ್ಟ್ಯಾಂಡ್-ಅಪ್ ಶೋದಲ್ಲಿ ಜನಪ್ರಿಯ ಹಿಂದಿ ಹಾಡಿನ ಸಾಹಿತ್ಯವನ್ನು ತಿದ್ದಿ, ಶಿಂಧೆ ಅವರ ರಾಜಕೀಯ ಜೀವನವನ್ನು ವ್ಯಂಗ್ಯವಾಡಿದ್ದರು. ಈ ಟೀಕೆಗೆ ಶಿವಸೇನೆಯ ಆಕ್ರೋಶಕ್ಕೆ ಕಾರಣವಾಗಿದ್ದವು.
Not Clicked at a comedy club ❤️❤️❤️ pic.twitter.com/pV7P83jgEn
— Kunal Kamra (@kunalkamra88) November 24, 2025