×
Ad

ಕೊಚ್ಚಿ ಸಮೀಪ ಲೈಬಿರಿಯ ಹಡಗು ಸಮುದ್ರದಲ್ಲಿ ಸಮಾಧಿ

Update: 2025-05-25 21:11 IST

Credit : thenewsminute.com

ಕೊಚ್ಚಿ: ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆಯ ಅವಿರತ ಪ್ರಯತ್ನಗಳ ಹೊರತಾಗಿಯೂ ಲೈಬಿರಿಯದ ಕಂಟೈನರ್ ಹಡಗು ‘ಎಂಎಸ್‌ಸಿ ಎಲ್ಸಾ3’ ಕೊಚ್ಚಿ ಕರಾವಳಿ ಸಮೀಪದ ಅರಬ್ಬಿ ಸಮುದ್ರದಲ್ಲಿ ರವಿವಾರ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಎಲ್ಲಾ 24 ವಿದೇಶಿ ನಾವಿಕರನ್ನು ರಕ್ಷಿಸಲಾಗಿದೆ.

ಹಡಗು ಮುಳುಗಿರುವುದನ್ನು ರಕ್ಷಣಾ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ. ಹಡಗಿನೊಳಗೆ ಅನಿಯಂತ್ರಿತವಾಗಿ ಸಮುದ್ರದ ನೀರು ಹರಿದುಬಂದ ಕಾರಣದಿಂದಾಗಿ ದುರಂತ ಸಂಭವಿಸಿದೆಯೆಂದು ಅದು ಹೇಳಿದೆ.

ಈ ಹಡಗು ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡ 25 ಕಂಟೈನರ್‌ಗಳು ಸೇರಿದಂತೆ ಒಟ್ಟು 640 ಕಂಟೈನರ್‌ಗಳನ್ನು ಒಯ್ಯುತ್ತಿತ್ತು. ಹಡಗಿನಲ್ಲಿ 84.44 ಮೆಗಾಟೆನ್ ಡೀಸೆಲ್ ಹಾಗೂ 367.1 ಮೆಗಾಟನ್ ಫರ್ನೇಸ್ ಎಣ್ಣೆ ಕೂಡಾ ಇದ್ದುದಾಗಿ ತಿಳಿದುಬಂದಿದೆ.

ಶನಿವಾರ ಮಧ್ಯಾಹ್ನ ‘ಎಂಎಸ್‌ಸಿ ಎಲ್ಸಾ3’ ಹಡಗು ವಿಳಿಂಝಮ್‌ನಿಂದ ಕೊಚ್ಚಿಯೆಡೆಗೆ ಸಾಗುತ್ತಿದ್ದಾಗ 26 ಡಿಗ್ರಿಯಷ್ಟು ವಾಲಿದೆ. ಕೊಚ್ಚಿ ಕರಾವಳಿಯಿಂದ 38 ನಾಟಿಕಲ್ ಮೈಲು ಆಗ್ನೇಯದಲ್ಲಿ ಅದು ತನ್ನ ಸ್ಥಿರತೆಯನ್ನು ಕಳೆದುಕೊಂಡಿತು. ಆಗ ಹಡಗಿನ ಸಿಬ್ಬಂದಿ‘ ಅಪಾಯದ ಸಂದೇಶ’ ಕಳುಹಿಸಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಕೊಚ್ಚಿಯಲ್ಲಿನ ಭಾರತೀಯ ತಟರಕ್ಷಣಾ ದಳವು ತಕ್ಷಣವೇ ಸ್ಥಳಕ್ಕೆ ಧಾವಿಸಿತ್ತು. ವೈಮಾನಿಕ ಕಣ್ಗಾವಲಿಗಾಗಿ ತಟರಕ್ಷಣಾ ದಳದ ಡೊರ್ನಿಯರ್ ವಿಮಾನವು ನಿಯೋಜನೆಗೊಂಡಿತು. ತರುವಾಯ ಐಸಿಜಿಯ ಗಸ್ತು ಹಡಗುಗಳುಹಾಗೂ ಎಂವಿ ಹ್ಯಾನ್‌ಯಿ ಹಾಗೂ ಎಂಎಸ್‌ಸಿ ಸಿಲ್ವರ್ 2 ಹಡಗುಗಳು ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.

ಕರಾವಳಿ ಕಾವಲು ಪಡೆಯು ಶನಿವಾರ ಸಂಜೆ ಹಡಗಿನಲ್ಲಿದ್ದ 21 ಮಂದಿಯನ್ನು ರಕ್ಷಿಸಿದೆ. ತಡರಾತ್ರಿಯ ವೇಳೆಗೆ ಹಡಗಿನ ಪರಿಸ್ಥಿತಿ ಹದಗೆಟ್ಟಿದ್ದು, ಹಡಗಿನ ಕ್ಯಾಪ್ಟನ್ ಹಾಗೂ ಮುಖ್ಯ ಎಂಜಿನಿಯರ್ ಸೇರಿದಂತೆ ಉಳಿದ ಮೂವರನ್ನು ಭಾರತೀಯ ನೌಕಾಪಡೆಯ ಐಎನ್‌ಎಸ್‌ ಸುಜಾತಾ ಮೂಲಕ ರಕ್ಷಿಸಲಾಯಿತು.ಈ ನತದೃಷ್ಟ ಹಡಗು ರವಿವಾರ ಮುಂಜಾನೆ 7:50ರ ವೇಳೆಗೆ ಮುಳುಗಡೆಗೊಂಡಿದೆ.

ಹಡಗಿನ ಕೆಲವು ಕಂಟೈನರ್‌ಗಳಲ್ಲಿ ಅಪಾಯಕಾರಿ ರಾಸಾಯನಿಕಯುಕ್ತ ಸಾಮಾಗ್ರಿಗಳಿರುವುದು ಕೇರಳ ಕರಾವಳಿಯಾದ್ಯಂತ ಆತಂಕವನ್ನು ಮೂಡಿಸಿದೆ. ಸಮುದ್ರ ತೀರಕ್ಕೆ ಹಡಗಿನ ಅವಶೇಷಗಳು ಬಂದು ಬಿದ್ದಲ್ಲಿ ಅವುಗಳನ್ನು ಸ್ಪರ್ಶಿಸಕೂಡದೆಂದು ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News