ನೇಪಾಳ | ಪೊಲೀಸ್ ಕಾರ್ಯಾಚರಣೆಗೆ ಭಾರೀ ಟೀಕೆ
ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ರದ್ದು
PC : NDTV
ಕಠ್ಮಂಡು: ಸೋಮವಾರ ಪ್ರತಿಭಟನಾನಿರತ ಯುವಜನರ ವಿರುದ್ಧ ಪೊಲೀಸರು ಕಠ್ಮಂಡುವಿನಲ್ಲಿ ನಡೆಸಿರುವ ದಮನ ಕಾರ್ಯಾಚರಣೆಯನ್ನು ಪ್ರಮುಖ ಆನ್‌ಲೈನ್ ಸುದ್ದಿ ಮಾಧ್ಯಮಗಳು ಕಟುವಾಗಿ ಖಂಡಿಸಿವೆ.
ಈ ಸೋಮವಾರವು ನೇಪಾಳದ ಇತ್ತೀಚಿನ ಇತಿಹಾಸದ ಅತ್ಯಂತ ಕರಾಳ ದಿನಗಳ ಪೈಕಿ ಒಂದಾಗಿದೆ ಎಂಬುದಾಗಿ ಅವು ಬಣ್ಣಿಸಿವೆ.
ಒಂದೇ ದಿನದಲ್ಲಿ ಅತಿ ಹೆಚ್ಚಿನ ಪ್ರತಿಭಟನಾಕಾರರು ಮೃತಪಟ್ಟಿರುವ ಸೋಮವಾರವು ‘‘ಕಪ್ಪು ದಿನ’’ವಾಗಿದೆ ಎಂದು ಜನಪ್ರಿಯ ಸುದ್ದಿ ವೆಬ್‌ಸೈಟ್ ಗಳು ಹೇಳಿವೆ .
ಮಂಗಳವಾರ, ನೇಪಾಳ ರಾಜಧಾನಿಯಲ್ಲಿರುವ ತ್ರಿಭುವನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಭೂಸ್ಪರ್ಶದ ಅಂತಿಮ ಪ್ರಕ್ರಿಯೆಗೆ ತಯಾರುಗೊಳ್ಳುತ್ತಿದ್ದಾಗ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಬೆಂಕಿ ಗೋಚರಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವೊಂದು ದಿಲ್ಲಿಗೆ ಹಿಂದಿರುಗಿತು ಎಂದು ಮೂಲವೊಂದು ತಿಳಿಸಿದೆ.
‘‘ಕಠ್ಮಂಡುನಲ್ಲಿ ಪ್ರಸಕ್ತ ನೆಲೆಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದಿಲ್ಲಿ-ಕಠ್ಮಂಡು-ದಿಲ್ಲಿ ಮಾರ್ಗದಲ್ಲಿ ಸಂಚರಿಸುವ ವಿಮಾನಗಳನ್ನು ಮಂಗಳವಾರ ರದ್ದುಪಡಿಸಲಾಗಿದೆ. ನಾವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ’’ ಎಂದು ಮಂಗಳವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಏರ್ ಇಂಡಿಯಾ ತಿಳಿಸಿದೆ.
ಮಂಗಳವಾರ, ಕರ್ಫ್ಯೂ ಜಾರಿಯಲ್ಲಿದ್ದ ಹೊರತಾಗಿಯೂ ಕಠ್ಮಂಡು ಮತ್ತು ದೇಶದ ಇತರ ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಕಠ್ಮಂಡುನ ಕಲಂಕಿ, ಕಾಳಿಮತಿ, ತಹಚಲ್ ಮತ್ತು ಬಾನೇಶ್ವರ್ ಹಾಗೂ ಲಲಿತ್‌ಪುರ ಜಿಲ್ಲೆಯ ಚ್ಯಾಸಲ್, ಚಪಗೌ ಮತ್ತು ತೆಕೊ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದವು.
ವಿದ್ಯಾರ್ಥಿಗಳೇ ಹೆಚ್ಚಾಗಿದ್ದ ಪ್ರತಿಭಟನಾಕಾರರು, ಜನರು ಸಭೆ ಸೇರುವುದನ್ನು ನಿರ್ಬಂಧಿಸುವ ಆದೇಶಗಳನ್ನು ಧಿಕ್ಕರಿಸಿ ‘‘ವಿದ್ಯಾರ್ಥಿಗಳನ್ನು ಕೊಲ್ಲಬೇಡಿ’’ ಮುಂತಾದ ಘೋಷಣೆಗಳನ್ನು ಕೂಗಿದರು.
ಕಲಂಕಿಯಲ್ಲಿ ಪ್ರತಿಭಟನಾಕಾರರು ಟಯರ್‌ಗಳನ್ನು ಸುಟ್ಟು ರಸ್ತೆಗಳನ್ನು ಬಂದ್ ಮಾಡಿದರು.
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡುವ ನಿಮಿಷಗಳ ಮೊದಲು, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಒಳಗೊಂಡ ಪ್ರತಿಭಟನಾಕಾರರು ಸಂಸತ್‌ಗೆ ನುಗ್ಗಿ ಒಂದು ಕಟ್ಟಡಕ್ಕೆ ಬೆಂಕಿ ಹಚ್ಚಿದರು.
ಪ್ರತಿಭಟನಾಕಾರರು ಒಲಿ ಮತ್ತು ಇತರ ಹಿರಿಯ ನಾಯಕರ ಮನೆಗಳಿಗೂ ಬೆಂಕಿ ಹಚ್ಚಿದರು.
ಸಾವಿರಾರು ಜನರು ಸಂಸತ್ ಗೆ ನುಗ್ಗುವುದು ವೀಡಿಯೊ ತುಣುಕುಗಳು ತೋರಿಸಿವೆ. ಸಂಸತ್‌ನ ಒಂದು ಭಾಗದಲ್ಲಿ ಹೊಗೆಯೂ ಕಾಣಿಸಿಕೊಂಡಿತು. ಬೆಂಕಿ ಉರಿಯುತ್ತಿರುವಂತೆಯೇ, ಸಾವಿರಾರು ಜನರು ಸಂಸತ್‌ನತ್ತ ನಡೆದುಕೊಂಡು ಹೋಗುವುದನ್ನು ಮುಂದುವರಿಸಿದರು.
ಪ್ರತಿಭಟನಾಕಾರರು ಸಂಪರ್ಕ ಸಚಿವ ಪೃಥ್ವಿ ಸುಬ್ಬ ಗುರುಂಗ್ ಅವರ ಲಲಿತಪುರ ಜಿಲ್ಲೆಯ ಸುನಕೊತಿ ಎಂಬಲ್ಲಿರುವ ಮನೆಗೆ ಕಲ್ಲುಗಳನ್ನು ಎಸೆದರು. ಸಾಮಾಜಿಕ ಮಾಧ್ಯಮಗಳ ನಿಷೇಧಕ್ಕೆ ಗುರುಂಗ್ ಆದೇಶ ನೀಡಿದ್ದರು.
ಪ್ರತಿಭಟನಾಕಾರರು ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್ ದಹಲ್ ‘ಪ್ರಚಂಡ’ರ ಖುಮಲ್ತಾರ್‌ನಲ್ಲಿರುವ ಮನೆ ಮತ್ತು ಶೇರ್ ಬಹಾದುರ್ ದೇವುಬ ಅವರ ಬುದನೀಲಕಂಠದಲ್ಲಿರುವ ಮನೆಯಲ್ಲೂ ದಾಂಧಲೆ ನಡೆಸಿದರು.
ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧದ ವಿರುದ್ಧ ನೇಪಾಳದ ಯುವಜನತೆ ನಡೆಸಿದ ಬಂಡಾಯ ತೀವ್ರಗೊಳ್ಳುತ್ತಿದ್ದಂತೆಯೇ ಸರಕಾರವು ಸೋಮವಾರ ರಾತ್ರಿ ನಿಷೇಧವನ್ನು ವಾಪಸ್ ಪಡೆದುಕೊಂಡಿದೆ.
ವಾಟ್ಸ್‌ಆ್ಯಪ್, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಮತ್ತು 22 ಇತರ ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ನೇಪಾಳ ಸರಕಾರ ಇತ್ತೀಚೆಗೆ ನಿಷೇಧಿಸಿತ್ತು. ಇದರ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.