×
Ad

ಮುಂಬೈ | ಚುನಾವಣಾಧಿಕಾರಿಯ ಮೊಬೈಲ್ ಬಳಸಿ ಲೋಕಸಭಾ ಚುನಾವಣಾ ಫಲಿತಾಂಶ ತಿರುಚಲಾಗಿದೆಯೇ?

Update: 2024-06-18 17:54 IST

ರವೀಂದ್ರ ವಾಯ್ಕರ್

ಮುಂಬೈ : ಇವಿಎಂ ನಲ್ಲಿ ಹ್ಯಾಕಿಂಗ್ ಮಾಡಲು ಸಾಧ್ಯ ಎಂದು ಎಲಾನ್ ಮಸ್ಕ್ ಹೇಳಿದ್ದು ಒಂದೆಡೆ ಚರ್ಚೆಗೆ ಆಸ್ಪದ ಕೊಟ್ಟಿರುವುದರ ನಡುವೆ ಇವಿಎಂ ವಿಚಾರದ ಕಾರಣಕ್ಕೇ ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರ ದೇಶಾದ್ಯಂತ ಕಳೆದ ಒಂದೆರಡು ದಿನಗಳಿಂದ ದೊಡ್ಡ ಚರ್ಚೆಯಲ್ಲಿದೆ.

ಶಿವಸೇನೆ ಶಿಂಧೆ ಬಣದ ರವೀಂದ್ರ ವಾಯ್ಕರ್ ಅವರು ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ಗೆದ್ದಿರುವುದು ಕೇವಲ 48 ಮತಗಳ ಅಂತರದಿಂದ. ಅವರ ವಿರುದ್ಧ ಶಿವಸೇನೆ ಉದ್ಧವ್ ಬಣದ ಅಮೋಲ್ ಕೀರ್ತಿಕರ್ ಕಣದಲ್ಲಿದ್ದರು.

ವಾಯ್ಕರ್ ಸಂಬಂಧಿ ಚುನಾವಣಾಧಿಕಾರಿಯ ಫೋನ್ ಬಳಸಿ, ಆ ಫೋನಿನಿಂದ ಇವಿಎಂ ಅನ್ನು ಅನ್ಲಾಕ್ ಮಾಡಲಾಗಿತ್ತು ಎಂಬ ಗಂಭೀರ ಅರೋಪ ಈಗ ತೀವ್ರ ವಿವಾದ ಎಬ್ಬಿಸಿದೆ.

ಚಂಡೀಗಡದಲ್ಲಿ ವಿಪಕ್ಷಗಳ ಮತಗಳನ್ನು ಚುನಾವಣಾಧಿಕಾರಿಯೇ ರದ್ದುಪಡಿಸಿದ ಹಾಗೆ ಇಲ್ಲಿಯೂ ಚುನಾವಣಾಧಿಕಾರಿಯನ್ನು ಬಳಸಿಕೊಂಡು ರಾಜ್ಯದ ಆಡಳಿತಾರೂಢ ಪಕ್ಷ ಆಟವಾಡಿತೇ ಎಂಬ ಅನುಮಾನ ಈಗ ಎದ್ದಿದೆ.

ಅಲ್ಲಿ ಬಿಜೆಪಿ ಹಗರಣ ಸಿಸಿಟಿವಿ ದೃಶ್ಯಾವಳಿಗಳ ಮೂಲಕವೇ ಬಯಲಾಗಿತ್ತು. ಅದರಂತೆ ಇಲ್ಲಿಯೂ ಸಿಸಿಟಿವಿ ದೃಶ್ಯವಳಿಗಳನ್ನು ಬಿಡುಗಡೆ ಮಾಡಲು ಶಿವಸೇನೆ ಉದ್ಧವ್ ಬಣ ಆಗ್ರಹಿಸಿದೆ.

ಮತ್ತೆ ಮತ್ತೆ ಮನವಿ ಮಾಡಿಕೊಂಡರೂ ಚುನಾವಣಾ ಆಯೋಗ ಮತ ಎಣಿಕೆ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸಿಲ್ಲ. ಆ ದೃಶ್ಯಾವಳಿ ಬಿಡುಗಡೆ ಮಾಡಿ ನಮ್ಮ ಹಕ್ಕುಗಳನ್ನು ಅದು ಬೆಂಬಲಿಸಲಿ ಎಂದು ಶಿವಸೇನೆ ಉದ್ಧವ್ ಬಣದ ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವುದಕ್ಕೂ ಉದ್ಧವ್ ಬಣ ಈಗ ತಯಾರಿ ನಡೆಸಿದೆ. ಮತ ಎಣಿಕೆ ಕೇಂದ್ರದ ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ ವಿರುದ್ಧ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಉದ್ಧವ್ ಬಣದ ನಾಯಕ ಅನಿಲ್ ಪರಬ್ ಮುಂದಾಗಿದ್ದಾರೆ.

ಸ್ವತಃ ನ್ಯಾಯವಾದಿ, ಕಾನೂನು ಪರಿಣಿತರಾಗಿರುವ ಅವರು, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇಲ್ಲಿ ಸರ್ಕಾರಿ ಯಂತ್ರ ಪೂರ್ತಿಯಾಗಿ ದುರ್ಬಳಕೆಯಾಗಿದೆ ಎಂಬುದು ಅನಿಲ್ ಪರಬ್ ಅವರ ಆರೋಪ.

“ನಾನು ಬಹಳಷ್ಟು ವರ್ಷಗಳಿಂದ ಬಹಳಷ್ಟು ಚುನಾವಣೆಗಳನ್ನು ಕಂಡಿರುವ ಕಾರ್ಯಕರ್ತನಾಗಿದ್ದೇನೆ. ಅದರ ಪ್ರಕ್ರಿಯೆ ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಮತ ಎಣಿಕೆಯಾಗುವಾಗ ಪ್ರತಿ ಸುತ್ತಿನ ನಂತರ ಮತಗಳು ಎಷ್ಟು ಎನ್ನುವುದನ್ನು ಘೋಷಿಸಲಾಗುತ್ತದೆ. ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಆ ಸುತ್ತಿನಲ್ಲಿ ಬಂದಿವೆ ಎನ್ನುವುದು ಅಲ್ಲಿ ಗೊತ್ತಾಗುತ್ತದೆ. ಈ ಕ್ಷೇತ್ರದಲ್ಲಿ ಪೈಪೋಟಿಯಂತೂ ಬಿರುಸಾಗಿತ್ತು. 19ನೇ ಸುತ್ತಿನ ನಂತರ ಮತ ಎಣಿಕೆ ಬಳಿಕ ಎಷ್ಟು ಮತಗಳು ಬಂದವು ಎಂದು ಹೇಳುವುದನ್ನೇ ನಿಲ್ಲಿಸಿಬಿಡಲಾಯಿತು. ಯಾರಿಗೆ ಎಷ್ಟು ಮತಗಳು ಎಂಬುದನ್ನು ಘೋಷಿಸುವುದನ್ನೇ ನಿಲ್ಲಿಸಲಾಯಿತು. ಕೇಳಿದರೆ ಏನೇನೋ ಕಾರಣಗಳನ್ನು ಹೇಳುತ್ತಿದ್ದರು. ಈಗ ಹೇಳುತ್ತೇವೆ.. ಆಗ ಹೇಳುತ್ತೇವೆ ಎನ್ನತೊಡಗಿದರು. ಆಮೇಲೆ ಇದ್ದಕ್ಕಿದ್ದಂತೆ 25-26ನೇ ಸುತ್ತಿನಲ್ಲಿ ಎಲ್ಲಾ ಸುತ್ತುಗಳ ತಾಳೆ ಮಾಡಿ ಒಮ್ಮೆಲೆ ಹೇಳಲಾಯಿತು. ನಮ್ಮ ಅಭ್ಯರ್ಥಿ ಶಿಂಧೆ ಬಣದ ವಾಯ್ಕರ್ ಗಿಂತಲೂ 650 ಮತಗಳ ಅಂತರದಿಂದ ಮುಂದೆ ಇದ್ದರು” ಎನ್ನುತ್ತಾರೆ.

“ನಮ್ಮ ಎಣಿಕೆ ಪ್ರತಿನಿಧಿ ಇವಿಎಂ ಮತಗಳ ಜೊತೆ ಎಣಿಕೆಯಾದ ಮತಗಳ ತಾಳೆ ನೋಡಲು ಅಗತ್ಯವಾದ ಫಾರ್ಮ್ 17 ಭಾಗ-2ನ್ನು ಅವರು ಕೊಡಬೇಕು, ಆದರೆ ಜೋಗೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಮಗೆ ಆ ಫಾರ್ಮ್ ಅನ್ನೇ ಕೊಡಲಿಲ್ಲ. ಇತರ ಕೆಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ ಅರ್ಧಂಬರ್ಧ ಎಂಟ್ರಿಯಾಗಿದ್ದುದನ್ನು ಕೊಡಲಾಯಿತು” ಎಂದು ಪರಬ್ ಹೇಳುತ್ತಾರೆ.

ಹೀಗಿರುವಾಗ ನಾವು ತಾಳೆ ಮಾಡುವುದು ಹೇಗೆ ಸಾಧ್ಯ ಎಂಬುದು ಅವರ ಪ್ರಶ್ನೆ.

“ತಾಳೆ ಮಾಡಿಕೊಳ್ಳಲು ಇರುವ ಪ್ರಕ್ರಿಯೆ ಪಾರದರ್ಶಕವಾಗಿರಲಿಲ್ಲ. ನಾವು ಅದರ ಬಗ್ಗೆ ತಕರಾರು ತೆಗೆದೆವು. ಆದರೆ ನಮ್ಮ ಮಾತನ್ನು ಅವರು ಕೇಳಿಸಿಕೊಳ್ಳಲಿಲ್ಲ. 19ನೇ ಸುತ್ತಿನಲ್ಲಿ ಪೈಪೋಟಿ ತೀವ್ರವಾಗಿತ್ತು. ಆ ಸುತ್ತಿನ ನಂತರ ಏನೋ ಯಡವಟ್ಟು ನಡೆಯುತ್ತಿದೆ ಎಂಬುದು ತಿಳಿಯುತ್ತದೆ. ಆಗ ಅಲ್ಲಿ ಬಳಕೆಯಾಗಿದ್ದ ಫೋನ್ ಸರ್ಕಾರಿ ಅಧಿಕಾರಿಯದ್ದಾಗಿತ್ತು. ಹಾಗಾದರೆ, ಸರ್ಕಾರ ಅಧಿಕಾರಿಯ ಫೋನ್ ಬಳಕೆಗೆ ಯಾರು ಅಧಿಕಾರ ಕೊಟ್ಟಿದ್ದರು? ಹಾಗೊಂದು ವೇಳೆ ಅಧಿಕಾರ ಕೊಟ್ಟಿದ್ದೇ ಆದರೆ, ದೇಶದ ಎಲ್ಲಾ ಕಡೆ ಚುನಾವಣಾಧಿಕಾರಿಯ ಫೋನ್ ಬಳಕೆಗೆ ಅವಕಾಶ ಕೊಡಬೇಕಲ್ಲವೆ? ಬಳಕೆಗೆ ಫೊನ್ ಕೊಡುವುದಾದರೆ ಯಾರೋ ಒಬ್ಬರಿಗಲ್ಲ ಎಲ್ಲರಿಗೂ ಕೊಡಬೇಕು ಮತ್ತು ಎಲ್ಲ ಕಡೆಗೂ ಕೊಡಬೇಕಲ್ಲವೆ? ಯಾರು ಈ ಅಧಿಕಾರ ಕೊಡುತ್ತಾರೆ? ಚುನಾವಣಾ ಪ್ರಕ್ರಿಯೆಗೆ ಸಂಬಂಧಪಟ್ಟ ಒಟಿಪಿ ಬರುವ ಆ ಪೋನ್ ಅನ್ನು ಬೇರೆಯವರು ಹೇಗೆ ಬಳಕೆ ಮಾಡಿದರು? ನಾವು ತಕರಾರು ತೆಗೆದ ಬಳಿಕ ಆ ಫೋನ್ ಬಳಕೆ ನಿಲ್ಲಿಸಲಾಯಿತು. ಫೋನ್ ಅನ್ನು ಹೊರಗೆ ಕಳಿಸಿದರು. ಹಾಗಾದರೆ ಆ ಫೋನ್ ಮೂಲಕ ಏನೇನು ನಡೆಯಿತು, ಅದಕ್ಕೆ ಬಂದ ಒಟಿಪಿಗಳೇನು? ಹೇಗೆ ಫಲಿತಾಂಶ ಘೋಷಿಸಲಾಯಿತು? ಇವನ್ನೆಲ್ಲ ತಿಳಿಯುವುದು ಅಗತ್ಯವಾಗಿದೆ” ಎಂದು ಪರಬ್ ಗಂಭೀರವಾಗಿ ಪ್ರಶ್ನಿಸುತ್ತಾರೆ.

ಇಲ್ಲಿ ಎಣಿಕೆ ಪ್ರಕ್ರಿಯೆ ವೇಳೆ ನಡೆದ ಅಧ್ವಾನ ತಿಳಿಯಲು ಸಿಸಿಟಿವಿ ದೃಶ್ಯಾವಳಿ ಬೇಕಿದೆ. ಎರಡು ಮೂರು ದಿನಗಳಲ್ಲಿ ಕೊಡುತ್ತೇವೆ ಎಂದು ಭರವಸೆ ನೀಡಲಾಯಿತೆ ಹೊರತು ದೃಶ್ಯಾವಳಿ ನೀಡಿಲ್ಲ ಎಂದು ಅವರು ಆರೋಪಿಸುತ್ತಾರೆ.

ಹಾಗಾಗಿ ಇಲ್ಲೇನೋ ನಡೆದಿದೆ ಎಂಬ ಅನುಮಾನಗಳು ನಮಗೆ ಇವೆ. ಚುನಾವಣಾಧಿಕಾರಿಗೆ ಫೋನ್ ಕರೆಗಳು ಬರುತ್ತಲೇ ಇದ್ದುದನ್ನೂ ನಾವು ಗಮನಿಸಿದ್ದೇವೆ. ಯಾರ ಕಡೆಯಿಂದ ಬಂದವು, ಎಷ್ಟು ಬಾರಿ ಬಂದವು ಇದೆಲ್ಲವನ್ನೂ ನಾವು ಕೋರ್ಟ್ ಮುಂದೆ ಇಡಲಿದ್ದೇವೆ. ನಮಗೆ ನ್ಯಾಯ ಸಿಗಬೇಕಾಗಿದೆ ಎಂದು ಪರಬ್ ಹೇಳಿದ್ದಾರೆ.

ಫೋನ್ ಕರೆ ಯಾರ್ಯಾರಿಗೆ ಹೋಗಿದೆ, ಯಾವ್ಯಾವ ನಂಬರುಗಳಿಗೆ ಹೋಗಿದೆ ಎಂಬುದರ ಮಾಹಿತಿ ಇದೆ. ಅದರ ಡೇಟಾ ಸಿಕ್ಕಿದೆ. ಮತ ಎಣಿಕೆಯಾಗುವಾಗ ಫಲಿತಾಂಶ ಘೋಷಣೆ ಮೊದಲು ಎರಡೂ ಕಡೆಯವರನ್ನು ಏನಾದರೂ ತಕರಾರು ಇದೆಯೆ ಎಂದು ಕೇಳಲಾಗುತ್ತದೆ. ಆದರೆ ಇಲ್ಲಿ ಹಾಗೆ ಕೇಳದೆಯೆ ಫಲಿತಾಂಶ ಘೋಷಿಸಲಾಗಿದೆ. ಘೋಷಣೆಗೆ ಅವರು ಮುಂದಾದ ಹೊತ್ತಲ್ಲೂ ನಮ್ಮ ಏಜೆಂಟ್ ತಕರಾರು ತೆಗೆದಿದ್ದಾರೆ. ಆದರೆ ಈಗ ತಕರಾರು ತೆಗೆಯುವ ನಿಮ್ಮ ಅವಕಾಶ ಮುಗಿದಿದೆ. ನಿಮ್ಮ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಫಲಿತಾಂಶ ಘೋಷಿಸಲಾಯಿತು ಎಂದು ಪರಬ್ ದೂರಿದ್ದಾರೆ.

ಕೋರ್ಟ್ ಮೆಟ್ಟಿಲೇರುವ ವಿಚಾರದಲ್ಲಿ ಅರ್ಜಿ ಅಂತಿಮಗೊಳಿಸಲಾಗುತ್ತಿದೆ. ಏನನ್ನು ಕೋರ್ಟ್ ಬಳಿ ಕೇಳಬೇಕಾಗಿದೆ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಈ ವಿಚಾರ ಬಗೆಹರಿಯುವವರೆಗೆ ಈಗ ಸಂಸದರಾಗಿ ಆ ಕ್ಷೇತ್ರದಿಂದ ಆಯ್ಕೆಯಾಗಿರುವ ಶಿಂಧೆ ಬಣದ ವಾಯ್ಕರ್ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ತಡೆಯಬೇಕು ಎಂದು ಉದ್ಧವ್ ಬಣದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News