×
Ad

ಲಂಡನ್ ಮೂಲದ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿ ಅವರಿಗೆ ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧ : ವರದಿ

Update: 2025-10-21 16:41 IST

ಫ್ರಾನ್ಸೆಸ್ಕಾ ಓರ್ಸಿನಿ (Photo credit: translation.ashoka.edu.in)

ಹೊಸದಿಲ್ಲಿ,ಅ.23: ಐದು ವರ್ಷಗಳ ಅವಧಿಯ ಅಧಿಕೃತ ವೀಸಾವನ್ನು ಹೊಂದಿರುವ ಹೊರತಾಗಿಯೂ ಹಿಂದಿ ವಿಧ್ವಾಂಸೆ ಹಾಗೂ ಲಂಡನ್‌ನಲ್ಲಿರುವ ಪೂರ್ವ ಏಶ್ಯಾ ಹಾಗೂ ಆಫ್ರಿಕನ್ ಅಧ್ಯಯನಗಳ ವಿದ್ಯಾಲಯದ ಪ್ರೊಫೆಸರ್ ಫ್ರಾನ್ಸೆಸಾ ಓರ್ಸಿನಿ ಅವರನ್ನು ಸೋಮವಾರ ಭಾರತ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ‘ದಿ ವೈರ್’ ಸುದ್ದಿಜಾಲ ತಾಣ ವರದಿ ಮಾಡಿದೆ.

ಚೀನಾದಲ್ಲಿ ಅಕಾಡಮಿಕ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಬಳಿಕ ಓರ್ಸಿನಿ ಅವರು ಹಾಂಕಾಂಗ್‌ನಿಂದ ದಿಲ್ಲಿಗೆ ಆಗಮಿಸಿದ್ದರು. ಆದಾಗ್ಯೂ, ವಲಸೆ ಅಧಿಕಾರಿಗಳು ದೇಶದೊಳಗೆ ಪ್ರವೇಶಿಸಲು ಆಕೆಗೆ ಅನುಮತಿ ನಿರಾಕರಿಸಿದ್ದಾರೆಂದು ವರದಿ ಹೇಳಿದೆ.

ತನಗೆ ಭಾರತ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದಕ್ಕೆ ಅವರು ಯಾವುದೇ ಕಾರಣವನ್ನು ನೀಡಿಲ್ಲ. ತನ್ನನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಓರ್ಸಿನಿ ತಿಳಿಸಿದ್ದಾರೆ.

ಓರ್ಸಿನಿ ಅವರು ಹೊಸದಿಲ್ಲಿಯ ಕೇಂದ್ರೀಯ ಹಿಂದಿ ಸಂಸ್ಥೆ ಹಾಗೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿಯೂ ಅಧ್ಯಯನ ನಡೆಸುತ್ತಿದ್ದು. ಲಂಡನ್ ವಿವಿಯ ಭಾಗವಾದ ಎಸ್‌ಓಎಸ್‌ನಲ್ಲಿ ಅವರು ಪಿಎಚ್‌ಡಿ ಅಧ್ಯಯನವನ್ನು ಪೂರ್ತಿಗೊಳಿಸಿದ್ದರು.

ಓರ್ಸಿನಿ ಅವರು ಎಸ್‌ಓಎಸ್‌ನ ಭಾಷೆ, ಸಂಸ್ಕೃತಿ ಹಾಗೂ ಭಾಷಾಶಾಸ್ತ್ರೀಯ ವಿದ್ಯಾಲಯದಲ್ಲಿ ಹಿಂದಿ ಹಾಗೂ ದಕ್ಷಿಣ ಏಶ್ಯ ಸಾಹಿತ್ಯದ ಗೌರವ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಓರ್ಸಿನಿ ಅವರಂತೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ವಿದ್ವಾಂಸರು ಹಾಗೂ ಸಾಮಾಜಿಕ ಹೋರಾಟಗಾರರಿಗೆ ಭಾರತ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.

ತನ್ನ ಅಸ್ವಸ್ಥ ತಾಯಿಯನ್ನು ಭೇಟಿ ಮಾಡಲು ಕೇಂದ್ರ ಸರಕಾರವು ತನಗೆ ಮೂರು ಭಾರಿ ಅನುಮತಿಯನ್ನು ನಿರಾಕರಿಸಿದೆಯೆಂದು ಭಾರತೀಯ ಮೂಲದ ಜಾತಿವಾದ ವಿರೋಧಿ ಹೋರಾಟಗಾರ್ತಿ ಕ್ಷಮಾ ಸಾವಂತ್ ಅವರು ಫೆಬ್ರವರಿಯಲ್ಲಿ ಆಪಾದಿಸಿದ್ದರು. ತನಗೆ ಭಾರತ ಭೇಟಿಗೆ ಅವಕಾಶ ನಿರಾಕರಿಸಿರುವುದಕ್ಕೆ ಕಾರಣ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆಂದು ಅವರು ಹೇಳಿದ್ದರು.

ಕ್ಷಮಾ ಸಾವಂತ್ ಅವರು 2013ರಿಂದ 2023ರವರೆಗೆ ಸಿಯಾಟಲ್ ನಗರ ಮಂಡಳಿಗೆ ಚುನಾಯಿತ ಪ್ರತಿನಿಧಿಯಾಗಿದ್ದರು.

ಭಾರತ ಸರಕಾರವು ಜಾರಿಗೊಳಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ)ಯನ್ನು ವಿರೋಧಿಸುವ ಗೊತ್ತುವಳಿಯನ್ನು ಅವರು 2020ರಲ್ಲಿ ಸಿಯಾಟಲ್ ನಗರ ಮಂಡಳಿಯಲ್ಲಿ ಮಂಡಿಸಿದ್ದು, ಆನಂತರ ಅದು ಅಂಗೀಕಾರಗೊಂಡಿತ್ತು.

2023ರಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುವ ನಿರ್ಣಯವನ್ನು ಸಿಯಾಟಲ್ ನಗರ ಮಂಡಳಿಯಲ್ಲಿ ಮಂಡಿಸಿದ್ದರು. ಆನಂತರ ಮತದಾನದ ಮೂಲಕ ಅದು ಅಂಗೀಕಾರಗೊಂಡಿತ್ತು. ಇದರೊಂದಿಗೆ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ ಅಮೆರಿಕದ ಮೊದಲ ನಗರವೆಂಬ ಹೆಗ್ಗಳಿಕೆಗೆ ಸಿಯಾಟಲ್ ಪಾತ್ರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News