×
Ad

ಹೈಕೋರ್ಟ್ ನ್ಯಾಯಾಧೀಶರನ್ನು 'ಸವರ್ಣಿಯರಂತೆ', ಕೆಳ ನ್ಯಾಯಾಲಯದ ನ್ಯಾಯಾಧೀಶರನ್ನು ʼಶೂದ್ರರಂತೆ' ನೋಡಲಾಗುತ್ತಿದೆ : ಮಧ್ಯಪ್ರದೇಶ ಹೈಕೋರ್ಟ್

Update: 2025-07-26 13:34 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಮಧ್ಯಪ್ರದೇಶ ಹೈಕೋರ್ಟ್‌ ವಿಭಾಗೀಯ ಪೀಠ, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದ ನಡುವಿನ ಸಂಬಂಧವನ್ನು ಜಾತಿ ವ್ಯವಸ್ಥೆಗೆ ಹೋಲಿಕೆ ಮಾಡಿದೆ. ಕೆಳ ನ್ಯಾಯಾಲಯದ ನ್ಯಾಯಾಧೀಶರನ್ನು ʼಶೂದ್ರರುʼ ಮತ್ತು ʼದೀನರುʼ ಎಂಬಂತೆ ನೋಡಲಾಗುತ್ತಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ದಿನೇಶ್ ಕುಮಾರ್ ಪಲಿವಾಲ್ ಅವರ ವಿಭಾಗೀಯ ಪೀಠ ಜುಲೈ 14ರಂದು ಮಾಜಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಗತ್ ಮೋಹನ್ ಚತುರ್ವೇದಿ ಅವರ ವಜಾವನ್ನು ರದ್ದುಗೊಳಿಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಆದೇಶಗಳನ್ನು ನೀಡಿದ ನಂತರ ಅವರನ್ನು 2014ರಲ್ಲಿ ವಜಾಗೊಳಿಸಲಾಗಿತ್ತು.

ಈ ಕುರಿತ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅವರ ಪಿಂಚಣಿ ಪ್ರಯೋಜನಗಳನ್ನು ಪುನಃಸ್ಥಾಪಿಸಲು ಆದೇಶಿಸಿದೆ. ಭ್ರಷ್ಟಾಚಾರದ ಯಾವುದೇ ಪುರಾವೆಗಳಿಲ್ಲದಿದ್ದರೂ ಅವರು ಮತ್ತು ಅವರ ಕುಟುಂಬ ಅನುಭವಿಸಿದ ಕಷ್ಟಗಳು ಮತ್ತು ಅವರು ಎದುರಿಸಿದ ಸಾಮಾಜಿಕ ಅವಮಾನಕ್ಕಾಗಿ ರಾಜ್ಯ ಸರಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದೆ.

"ರಾಜ್ಯದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ನಡುವಿನ ಸಂಬಂಧವು ಪರಸ್ಪರ ಗೌರವವನ್ನು ಆಧರಿಸಿಲ್ಲ. ಬದಲಾಗಿ ಭಯ ಮತ್ತು ಕೀಳರಿಮೆಯ ಭಾವನೆ ಇದೆ. ಜಾತಿ ವ್ಯವಸ್ಥೆಯ ಛಾಯೆಯನ್ನು ಪ್ರತಿಬಿಂಬಿಸುತ್ತದೆ. ಹೈಕೋರ್ಟ್ ನಲ್ಲಿರುವವರು ಸವರ್ಣಿಯರಂತೆ ಇರುತ್ತಾರೆ. ಜಿಲ್ಲಾ ನ್ಯಾಯಾಧೀಶರನ್ನು ʼದೀನರುʼ ಎಂಬಂತೆ ನೋಡಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.

ಹೈಕೋರ್ಟ್ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಧೀಶರ ನಡುವಿನ ಸಂಬಂಧವು ಊಳಿಗಮಾನ್ಯ ದೊರೆ ಮತ್ತು ಜೀತದಾಳುಗಳ ನಡುವಿನ ಸಂಬಂಧದಂತಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News