×
Ad

ಭಾರಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಮಂದೀಪ್, ರೋಹನ್, ಮೋನು ಬಂಧನ

ಚೀನಾದಿಂದ ತುರ್ಕಿಯಾಗೆ ಸರಬರಾಜಾಗಿ, ಪಾಕಿಸ್ತಾನದ ಮೂಲಕ ಭಾರತಕ್ಕೆ ಬರುತ್ತಿದ್ದ ಶಸ್ತ್ರಾಸ್ತ್ರಗಳು

Update: 2025-11-22 18:57 IST

Photo Credit : NDTV

ಹೊಸದಿಲ್ಲಿ: ದಿಲ್ಲಿ ಪೊಲೀಸರು ಭಾರಿ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿದ್ದು, ಚೀನಾದಲ್ಲಿ ತಯಾರಾಗಿ, ತುರ್ಕಿಯಾ ಮೂಲಕ ಸರಬರಾಜಾಗಿ, ಪಾಕಿಸ್ತಾನದ ಮೂಲಕ ಭಾರತಕ್ಕೆ ಬರುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಜಾಲ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕ ಹೊಂದಿದ್ದು, ಅತ್ಯಾಧುನಿಕ ಪಿಸ್ತೂಲುಗಳನ್ನು ಪಾಕಿಸ್ತಾನದ ಮೂಲಕ ಭಾರತಕ್ಕೆ ಡ್ರೋನ್ ಗಳನ್ನು ಬಳಸಿಕೊಂಡು ಕಳ್ಳಸಾಗಣೆ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಕಳ್ಳಸಾಗಣೆ ಗುಂಪಿನ ನಾಲ್ವರನ್ನು ಬಂಧಿಸಿದ್ದು, ಈ ಪೈಕಿ ಪೊಲೀಸರಿಗೆ ಬೇಕಿದ್ದ ಓರ್ವ ಕ್ರಿಮಿನಲ್, ಪಂಜಾಬ್ ನ ಮಂದೀಪ್ ಹಾಗೂ ಆತನ ಇಬ್ಬರು ನಿಕಟವರ್ತಿಗಳಾದ ರೋಹನ್ ಮತ್ತು ಮೋನು ಸೇರಿದ್ದಾರೆ. ಈ ಇಬ್ಬರು ಉತ್ತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು 10 ಅತ್ಯಂತ ದುಬಾರಿ ವಿದೇಶಿ ಪಿಸ್ತೂಲುಗಳು ಹಾಗೂ 92 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋನು ಖತ್ರಿ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಮಂದೀಪ್ ವಿರುದ್ಧ ಹತ್ಯೆ ಪ್ರಕರಣ ಸೇರಿದಂತೆ ಅಸಂಖ್ಯಾತ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಡ್ರೋನ್ ಗಳು ಈ ಶಸ್ತ್ರಾಸ್ತ್ರಗಳ ಸರಕನ್ನು ನಿಗದಿತ ಸ್ಥಳಗಳಲ್ಲಿ ಬಿಸಾಡಿ ಹೋಗುತಿದ್ದವು ಎಂಬ ಸಂಗತಿ ತನಿಖೆಯ ವೇಳೆ ಬಯಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಸ್ಕ್ಯಾನರ್ ಗಳು ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ಈ ಸರಕನ್ನು ಕಾರ್ಬನ್ ಪೇಪರ್ ನೊಂದಿಗೆ ಸುತ್ತಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಸರಕನ್ನು ಇಳಿಸಲಾಗಿರುವ ಸ್ಥಳದಿಂದ ಅದನ್ನು ಸಂಗ್ರಹಿಸಿ, ದಿಲ್ಲಿಗೆ ಸರಬರಾಜು ಮಾಡುವಂತೆ ಈ ಗುಂಪಿನ ಸದಸ್ಯರಿಗೆ ನಿರ್ದೇಶಿಸಲಾಗುತ್ತಿತ್ತು ಎಂಬ ಸಂಗತಿ ತನಿಖೆಯ ವೇಳೆ ತಿಳಿದು ಬಂದಿದೆ.

ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕ್ರಿಮಿನಲ್ ಗಳಿಗೆ ಸರಬರಾಜು ಮಾಡಲು ಈ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಇಂತಹ ಅದೆಷ್ಟು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲಾಗಿದೆ ಹಾಗೂ ಈ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಗುಂಪುಗಳು ಅಥವಾ ವ್ಯಕ್ತಿಗಳಾರು ಎಂಬುದನ್ನು ಪತ್ತೆ ಹಚ್ಚಲು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News