×
Ad

ಮಧ್ಯಪ್ರದೇಶ | ಜಿಮ್‌ಗೆ ಮುಸ್ಲಿಮರಿಗೆ ಪ್ರವೇಶ ನಿಷೇಧಿಸುವಂತೆ ಸೂಚಿಸಿದ ಪೊಲೀಸ್ ಅಧಿಕಾರಿ : ವೀಡಿಯೊ ವೈರಲ್ ಬೆನ್ನಲ್ಲೇ ಕ್ಷೇತ್ರ ಕರ್ತವ್ಯದಿಂದ ಬಿಡುಗಡೆ

Update: 2025-06-03 15:39 IST

Screengrab/X

ಭೋಪಾಲ್: ಭೋಪಾಲ್‌ನಲ್ಲಿನ ಜಿಮ್ ಕೇಂದ್ರವೊಂದಕ್ಕೆ ಮುಸ್ಲಿಮರಿಗೆ ಪ್ರವೇಶ ನಿರ್ಬಂಧಿಸುವಂತೆ ಜಿಮ್ ಮಾಲಕರಿಗೆ ತಾಕೀತು ಮಾಡಿದ್ದ ಓರ್ವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅನ್ನು ಕ್ಷೇತ್ರ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶರ್ಮ ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಿಗೇ, ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

"ಇಲ್ಲಿಗೆ ಯಾವ ಮುಸ್ಲಿಂ ವ್ಯಕ್ತಿಯೂ ತರಬೇತಿ ನೀಡಲಾಗಲಿ ಅಥವಾ ತರಬೇತಿ ಪಡೆಯಲಾಗಲಿ ಬರಬಾರದು. ನಾನಿದನ್ನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ" ಎಂದು ಆ ವೈರಲ್ ವಿಡಿಯೊ ತುಣುಕಿನಲ್ಲಿ ಜಿಮ್ ಮಾಲಕರಿಗೆ ಆರೋಪಿ ಸಬ್ ಇನ್ಸ್‌ಪೆಕ್ಟರ್ ಸೂಚನೆ ನೀಡುತ್ತಿರುವುದನ್ನು ನೋಡಬಹುದಾಗಿದೆ.

ಪೊಲೀಸರ ಪ್ರಕಾರ, ಭೋಪಾಲ್‌ನ ಅಯೋಧ್ಯಾ ನಗರ್ ಪ್ರದೇಶದಲ್ಲಿರುವ ಸದರಿ ಜಿಮ್ ಕೇಂದ್ರಕ್ಕೆ ಭೇಟಿ ನೀಡಿದ್ದ ಕೆಲವು ಬಜರಂಗ ದಳದ ಕಾರ್ಯಕರ್ತರು, ಜಿಮ್ ಕೇಂದ್ರದಲ್ಲಿ ಮುಸ್ಲಿಂ ತರಬೇತುದಾರರಿರುವ ಬಗ್ಗೆ ತಕರಾರು ತೆಗೆದಿದ್ದರು ಎನ್ನಲಾಗಿದೆ.

ಇದಾದ ನಂತರ, ಸ್ಥಳದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ಶಮನ ಮಾಡಲೆಂದು ಪೊಲೀಸರಿಗೆ ಕರೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶರ್ಮ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೆ, ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಈ ತನಿಖೆಯ ನಂತರ, ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶರ್ಮರನ್ನು ಸೋಮವಾರ ಪೊಲೀಸ್ ಪಡೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News