ಮಧ್ಯಪ್ರದೇಶ | ಕ್ಷುಲ್ಲಕ ಕಾರಣಕ್ಕೆ ದಲಿತ ತಂದೆ, ಮಗನಿಗೆ ಥಳಿಸಿದ ಗುಂಪು
ಸಾಂದರ್ಭಿಕ ಚಿತ್ರ
ಸಿಹೋರೆ, ನ. 17: ಕ್ಷುಲ್ಲಕ್ಕ ಕಾರಣಕ್ಕೆ ದಲಿತ ಯುವಕ ಹಾಗೂ ಆತನ ತಂದೆಯನ್ನು ಪೊಲೀಸರ ಎದುರೇ ಅಟ್ಟಿಸಿಕೊಂಡು ಹೋಗಿ ಬರ್ಬರವಾಗಿ ಥಳಿಸಿದ ಘಟನೆ ಸಿಹೋರೆಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಈ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕೆಲವು ದುಷ್ಕರ್ಮಿಗಳು ದಲಿತ ಯುವಕ ಹಾಗೂ ಆತನ ತಂದೆಗೆ ಥಳಿಸುತ್ತಿರುವುದು ಕಂಡು ಬಂದಿದೆ.
ಆರೋಪಿಗಳಲ್ಲಿ ಒಬ್ಬರಾದ ದೀಪಕ್ ಪರ್ಮಾರ್ ರಾತ್ರಿ ಇದ್ದಕ್ಕಿದ್ದಂತೆ ತನ್ನ ಕಾರಿನ ಮುಂದೆ ಬಂದ ಬಳಿಕ ಘರ್ಷಣೆ ಆರಂಭವಾಯಿತು ಎಂದು ಸಂತ್ರಸ್ತ, ಅಂಬೇಡ್ಕರ್ ನಗರದ ನಿವಾಸಿ ಪ್ರವೇಶ್ ಪರಿಹಾರ್ ತಿಳಿಸಿದ್ದಾರೆ.
ಪರಿಹಾರ್ ಕಾರು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿರುವುದು ದೀಪಕ್ ನ ಕೋಪಕ್ಕೆ ಕಾರಣವಾಯಿತು. ಆತ ಪರಿಹಾರ್ ನ ಕೆನ್ನೆಗೆ ಬಾರಿಸಿದ. ಕೂಡಲೇ ಆತನ ಸಹವರ್ತಿಗಳು ಆಗಮಿಸಿದರು ಹಾಗೂ ಪರಿಹಾರ್ ಗೆ ನಿಂದಿಸಲು ಆರಂಭಿಸಿದರು. ಘರ್ಷಣೆ ತಪ್ಪಿಸಲು ಪರ್ವೇಶ್ ಮನೆಗೆ ಹೋದರು. ಆದರೆ, ಈ ವಿಷಯ ಅಲ್ಲಿಗೇ ಮುಗಿಯಲಿಲ್ಲ. ಅನಂತರ ದೀಪಕ್ ಹಾಗೂ ಆತನ ಗೆಳೆಯರು ಭೋಪಾಲ್ ನಕಾ ಪ್ರದೇಶದಲ್ಲಿ ಪರಿಹಾರ್ ಹಾಗೂ ಹಾಗೂ ಆತನ ತಂದೆ ಮೇಲೆ ದಾಳಿ ನಡೆಸಿದ್ದಾರೆ.
ಗಾಯಗೊಂಡ ಇಬ್ಬರೂ ಚಿಕಿತ್ಸೆಗೆ ಸಿಹೋರೆಯಲ್ಲಿರುವ ಜಿಲ್ಲಾಸ್ಪತ್ರೆಗೆ ತಲುಪಿದಾಗ, ದೀಪಕ್ ಪರ್ಮಾರ್, ಭಾನು ರಾಠೋಡ್ ಹಾಗೂ ನವೀನ್ ರಾಥೋಡ್ ಅವರನ್ನು ಹಿಂಬಾಲಿಸಿ ಆಸ್ಪತ್ರೆಗೆ ಬಂದರು. ಅಲ್ಲಿ ಪ್ರವೇಶ್ ಹಾಗೂ ಆತನ ತಂದೆಯನ್ನು ಹಿಡಿದು ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.
ಕೊಟ್ವಾಲಿ ಪೊಲೀಸರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಇತರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.