×
Ad

ರಾಜಸ್ಥಾನ | ಗೋ ಕಳ್ಳಸಾಗಣೆ ಆರೋಪದಲ್ಲಿ ಗುಂಪಿನಿಂದ ವ್ಯಕ್ತಿಯ ಹತ್ಯೆ ; ಐವರ ಬಂಧನ

Update: 2025-09-23 21:48 IST

ಆಸಿಫ್ ಬಾಬು ಮುಲ್ತಾನಿ | PC : Special arrangement \ thehindu.com

ಭೀಲವಾಡಾ,ಸೆ.23: ಗೋ ಕಳ್ಳಸಾಗಣೆ ಆರೋಪದಲ್ಲಿ ನಕಲಿ ಗೋರಕ್ಷಕರ ಗುಂಪೊಂದು ಮಧ್ಯಪ್ರದೇಶದ ಮಂದಸೌರ್ ನಿವಾಸಿಯೋರ್ವನನ್ನು ಥಳಿಸಿ ಹತ್ಯೆಗೈದಿದೆ.

ಸೆ.16ರಂದು ನಸುಕಿನ ಮೂರು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆಸಿಫ್ ಬಾಬು ಮುಲ್ತಾನಿ(35) ಮತ್ತು ಆತನ ಸೋದರ ಸಂಬಂಧಿ ಮೊಹ್ಸಿನ್ ಭೀಲವಾಡಾದ ಜಾನುವಾರು ಸಂತೆಯಲ್ಲಿ ತಮ್ಮ ಕೃಷಿ ಮತ್ತು ಹೈನುಗಾರಿಕೆೆ ಅಗತ್ಯಗಳಿಗಾಗಿ ಜಾನುವಾರುಗಳನ್ನು ಖರೀದಿಸಿ ಪಿಕಪ್ ಟ್ರಕ್‌ ನಲ್ಲಿ ಮಂದಸೌರ್‌ಗೆ ಮರಳುತ್ತಿದ್ದರು. ವಾಹನ ಮತ್ತು ಬೈಕ್‌ ಗಳಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಪಿಕಪ್ ಟ್ರಕ್‌ ಅನ್ನು ತಡೆದು, ಇಬ್ಬರನ್ನೂ ಹೊರಗೆಳೆದು ಗೋ ಕಳ್ಳಸಾಗಣೆ ಆರೋಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ತಾವು ಕೃಷಿ ಮತ್ತು ಹೈನುಗಾರಿಕೆಗಾಗಿ ಜಾನುವಾರುಗಳನ್ನು ಖರೀದಿಸಿದ್ದೇವೆ ಎಂದು ಅವರು ಅಲವತ್ತುಕೊಂಡರೂ ದಾಳಿಕೋರರು ಕೇಳಿರಲಿಲ್ಲ. ಮುಲ್ತಾನಿ ಬಳಿಯಿದ್ದ 36,000ರೂ.ಗಳನ್ನು ದೋಚಿದ್ದ ಅವರು, ಆತನ ಮೊಬೈಲ್‌ ನಿಂದ ಆತನ ಮನೆಗೆ ಫೋನ್ ಮಾಡಿ ಇನ್ನೂ 50,000 ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಕುಟುಂಬ ಸದಸ್ಯ ಮಂಜೂರ್ ಪೆಮ್ಲಾ ದೂರಿನಲ್ಲಿ ಆರೋಪಿಸಿದ್ದಾರೆ.

ಹಲ್ಲೆ ಸಂದರ್ಭದಲ್ಲಿ ಮೊಹ್ಸಿನ್ ತಪ್ಪಿಸಿಕೊಂಡು ಕಾಡಿನಲ್ಲಿ ಅಡಗಿಕೊಂಡು ಜೀವ ಉಳಿಸಿಕೊಂಡಿದ್ದರೆ, ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಮುಲ್ತಾನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ.

‘ನನ್ನ ಸೋದರ ಮುಸ್ಲಿಮನಾಗಿದ್ದು ಆತ ಜಾನುವಾರನ್ನು ಸಾಗಿಸುತ್ತಿದ್ದುದು ಆತನ ಏಕೈಕ ತಪ್ಪಾಗಿತ್ತು. ವಾಹನದಲ್ಲಿ ಒಂದೂ ಆಕಳು ಇರಲಿಲ್ಲ. ಎಮ್ಮೆಗಳು ಮತ್ತು ಎತ್ತುಗಳು ಮಾತ್ರ ಇದ್ದವು ’ ಎಂದು ಪೆಮ್ಲಾ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳ ಪೈಕಿ ದೇವ ಗುರ್ಜರ್, ಕುನಾಲ್ ಮಾಲ್ಪುರಾ, ಪ್ರದೀಪ್ ರಾಜಪುರೋಹಿತ್, ನಿತೀಶ್ ಸೈನಿ ಮತ್ತು ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪತ್ರಕರ್ತ ಮುಹಮ್ಮದ್ ಝುಬೇರ್, ಜಾನುವಾರು ಜಾತ್ರೆಯಿಂದ ಖರೀದಿಸಿದ ಹೋರಿಗಳನ್ನು ರಸೀದಿಗಳೊಂದಿಗೆ ಹೊತ್ತೊಯ್ದಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂಸೆಗೆ ಬಲಿಯಾದ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮಂದಸೌರ್ ಜಿಲ್ಲೆಯ ಮುಲ್ತಾನ್‌ಪುರದ ನಿವಾಸಿ ಆಸಿಫ್ ಬಾಬು ಮುಲ್ತಾನಿ ಎಂಬವರು, ತಮ್ಮ ಸೋದರಸಂಬಂಧಿ ಮೊಹ್ಸಿನ್ ಜೊತೆಯಲ್ಲಿ ರಾಜಸ್ಥಾನದ ಭಿಲ್ವಾರಾದ ಲ್ಯಾಂಬಿಯಾ ರೈಲಾದ ಜಾನುವಾರು ಮಾರುಕಟ್ಟೆಯಿಂದ ಕೃಷಿ ಹಾಗೂ ಡೈರಿ ಉದ್ದೇಶಕ್ಕಾಗಿ ಹಸುಗಳನ್ನು ಖರೀದಿಸಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಸ್ವಘೋಷಿತ ಗೋರಕ್ಷಕರೆಂದು ಗುರುತಿಸಲ್ಪಟ್ಟ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದ್ದು, ಆಸಿಫ್ ಬಾಬು ಮುಲ್ತಾನಿ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

"ಈ ಘಟನೆಗೆ ಸಂಬಂಧಿಸಿದಂತೆ ದಿ ಹಿಂದೂ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಮಾತ್ರ ವರದಿ ಮಾಡಿದ್ದು, ಇತರೆ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ಮೌನ ವಹಿಸಿವೆ. ಅಲ್ಪಸಂಖ್ಯಾತರ ವಿರುದ್ಧದ ಇಂತಹ ದ್ವೇಷ ಅಪರಾಧಗಳನ್ನು ಸುದ್ದಿ ವಾಹಿನಿಗಳು ಸಾಮಾನ್ಯೀಕರಿಸುತ್ತಿರುವುದರ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ", ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News